ರೈತ ವಿರೋಧಿ ಕಾಯ್ದೆ ಜಾರಿಗೊಳಿಸಿದ ಬಿಜೆಪಿ ವಿರುದ್ಧ ಮತ ಹಾಕಲು ಕರೆ

ತುಮಕೂರು, ಅ. ೩೦- ರೈತರು, ದಲಿತರು, ಕಾರ್ಮಿಕರ ವಿರೋಧಿಯಾದ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಬಿಜೆಪಿ ವಿರುದ್ದ ಅನ್ನ ತಿನ್ನುವ ಎಲ್ಲರೂ ಮತ ಚಲಾಯಿಸುವಂತೆ ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ಪ್ರಕಾಶ್ ಕಮ್ಮರಡಿ ಮನವಿ ಮಾಡಿದ್ದಾರೆ.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ರೈತ, ಕಾರ್ಮಿಕ ಹಾಗೂ ದಲಿತ ವಿರೋಧಿ ನೀತಿಗಳಿಂದಾಗಿ ಇಡೀ ದೇಶ ಅತಂತ್ರ ಸ್ಥಿತಿಗೆ ತಲುಪಿದೆ. ಜನ ವಿರೋಧಿ ಕಾಯ್ದೆಗಳ ವಿರುದ್ದ ನಿರಂತರ ಹೋರಾಟವನ್ನು ಐಕ್ಯ ಹೋರಾಟ ಸಮಿತಿ ರೂಪಿಸುತ್ತಾ ಬಂದಿದೆ. ಈ ಹೋರಾಟ ಮತವಾಗಿ ಪರಿವರ್ತನೆಯಾಗಬೇಕು ಎಂಬ ಉದ್ದೇಶದಿಂದ ಸಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯಲ್ಲಿ ಕರಪತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಬಿಜೆಪಿ ಪಕ್ಷವನ್ನು ಸೋಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ತರಾತುರಿಯಲ್ಲಿ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆಗಳ ವಿರೋಧಿ ನೀತಿ, ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಿರುದ್ದ ನಿರಂತರ ಹೋರಾಟವನ್ನು ದಲಿತ, ರೈತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ರೂಪಿಸಿದೆ. ಇದರ ಫಲವಾಗಿ ಮೇಲ್ಮನೆಯಲ್ಲಿ ಸದರಿ ಕಾಯ್ದೆಗಳಿಗೆ ಬೆಂಬಲ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಮರಣಶಾಸನವಾಗಿರುವ ಸದರಿ ಕಾಯ್ದೆಗಳು ಮತ್ತೆ ಮರುಕಳಿಸಬಾರದೆಂದರೆ ಬಿಜೆಪಿಯನ್ನು ಈ ಉಪಚುನಾವಣೆಯಲ್ಲಿ ಜನರು, ಅದರಲ್ಲಿಯೂ ರೈತರು, ಕಾರ್ಮಿಕರು, ದಲಿತರು ಒಗ್ಗೂಡಿ ಸೋಲಿಸಬೇಕಾಗಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಮಾತನಾಡಿ, ಕಳೆದ ಸೆಪ್ಟಂಬರ್ ೨೬ ರಂದು ನಡೆದ ಜನತಾ ಪರ್ಯಾಯ ಅಧಿವೇಶನದಲ್ಲಿ ತೆಗೆದುಕೊಳ್ಳಲಾದ ನಿರ್ಣಯದಂತೆ ಸಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯಲ್ಲಿ ಜನವಿರೋಧಿ ಬಿಜೆಪಿ ಪಕ್ಷವನ್ನು ಸೋಲಿಸುವಂತೆ ಕರೆ ನೀಡಲಾಗಿದೆ. ಇದರ ಭಾಗವಾಗಿ ಸಿರಾ ಕ್ಷೇತ್ರದಲ್ಲಿ ಇಂದು ರೈತರ ಸಭೆ ನಡೆಸಿ, ಕರ ಪತ್ರ ನೀಡಿ, ಜನರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಕರ ಪತ್ರ ತಲುಪಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಲಿದ್ದಾರೆ ಎಂದರು. ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕರೆಗೋಡು ಮಾತನಾಡಿ, ದೇಶದಲ್ಲಿ ಸಾಮಾಜಿಕ ನ್ಯಾಯವೆಂಬದು ಮರೀಚಿಕೆಯಾಗಿದೆ. ದಲಿತರು, ಅಲ್ಪಸಂಖ್ಯಾತರನ್ನು ಒಡೆದು ಆಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಒಂದು ವೇಳೆ ಬಿಜೆಪಿಯವರ ಬಣ್ಣದ ಮಾತಿಗೆ ಬೆರಗಾಗಿ ದಲಿತರು ಬಿಜೆಪಿಗೆ ಮತ ನೀಡಿದರೆ, ಅವರ ಬಾಳು ಬಾಣಲೆಯಿಂದ ಬೆಂಕಿಗೆ ಹಾರಿದಂತಾಗುತ್ತದೆ. ಒಂದೊಂದೆ ಸರ್ಕಾರಿ ಸಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿ ಎಂಬುದು ಮರೀಚಿಕೆಯಾಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲ ದಲಿತರು ಬಿಜೆಪಿ ವಿರುದ್ದ ಮತ ಚಲಾಯಿಸುವಂತೆ ಮನವಿ ಮಾಡಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಚಮಾರಸ ಮಾಲಿ ಪಾಟೀಲ್ ಮಾತನಾಡಿ, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಇನ್ನಿಲ್ಲದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ, ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಕೃಷಿ ವಲಯವನ್ನು ಅತ್ಯಂತ ನಿಕೃಷ್ಟವಾಗಿ ಕಂಡಿದ್ದು, ಕೃಷಿ ಸನ್ಮಾನ ಯೋಜನೆಯ ಮೂಲಕ ಕೃಷಿಕರಿಗೆ ಭಿಕ್ಷುಕರಂತೆ ಮಾಡಿ ಅವಮಾನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಯತಿರಾಜು, ಕಾರ್ಮಿಕ ಮುಖಂಡರಾದ ಕಾಳಪ್ಪ, ರವಿಕಿರಣ್, ಪೊನ್ನಪ್ಪ, ವೆಂಕಟೇಗೌಡ, ಎಂ.ಶಂಕರಪ್ಪ, ರಾಮು, ಚನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.