ರೈತ ವಿರೋಧಿ ಕಾಯಿದೆ ಹಿಂಪಡೆಯಲು ಆಗ್ರಹ

ಮೈಸೂರು: ಮೇ.23:- ರೈತ ವಿರೋಧಿ ಕಾಯಿದೆಗಳ ವಾಪಾಸ್ಸಾತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮಾತಿನಂತೆ ನಡೆದುಕೊಳ್ಳಬೇಕೆಂದು ರಾಜ್ಯ ರೈತಸಂಘ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎ.ಪಿ.ಎಂ.ಸಿ. ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಹಾಗೂ ಸಂರಕ್ಷಣಾಕಾಯ್ದೆಯನ್ನು ಕೂಡಲೇ ವಾಪಸ್ಸು ಪಡೆಯಲು ಆರು ತಿಂಗಳ ಗಡುವು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತಸ್ನೇಹಿ ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ಸಂಘ ಆಗ್ರಹಿಸುತ್ತದೆ ಎಂದರು.
ಕೇಂದ್ರ ಸರ್ಕಾರ ರೂಪಿಸಿರುವ ವಿದ್ಯುಚ್ಛಕ್ತಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರದೆ ಇರುವಂತೆ ಘೋಷಣೆ ಮಾಡಬೇಕು. ಕೃಷಿಬೆಲೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ಮತ್ತು ಸವಲತ್ತುಗಳನ್ನು ನೀಡಿ ಅದಕ್ಕೆ ಶಾಸನಾತ್ಮಕ ಸ್ವರೂಪ ನೀಡಬೇಕು. ರಾಜ್ಯದ ಕೃಷಿ ಉತ್ಪನ್ನಗಳಿಗೆ ಡಾ.ಸ್ವಾಮಿನಾಥನ್ ವರದಿ ಅನ್ವಯ ಕನಿಷ್ಠ ಬೆಂಬಲ ಬೆಲೆ ದೊರಕಿಸಬೇಕೆಂದು ಒತ್ತಾಯಿಸಿದರು.
ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಮತದಾರರು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣಯ್ಯರವರನ್ನು ವಿಧಾನಸಭೆಗೆ ಆಯ್ಕೆಮಾಡಿ ಕಳುಹಿಸಿರುವುದು ಸ್ವಾಗತಾರ್ಹ. ರಾಜ್ಯದ ರೈತರು, ದುಡಿಯುವ
ವರ್ಗದ ಜನತೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆಂದರು.
ರೈತ ಚಳವಳಿಯಿಂದ ಬೆಳೆದು ಬಂದಿರುವ ಸಮಾಜವಾದಿ ಚಿಂತನೆಯ ಮೈಸೂಲಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದನ್ನು ರೈತಸಂಘ ಸ್ವಾಗತಿಸುತ್ತದೆ. ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದ ಒಳತಿಗಾಗಿ ಕೆಲಸಮಾಡಲಿ ಎಂದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಪ್ರಸನ್ನ ಎನ್ ಗೌಡ, ಪಿ.ಮರಂಕಯ್ಯ, ನಾಗನಹಳ್ಳಿ ವಿಜಯೇಂದ್ರ, ಮಂಡಕಳ್ಳಿ ಮಹೇಶ್ ಗೋಷ್ಠಿಯಲ್ಲಿದ್ದರು.