ರೈತ ವಿರೋಧಿ ಎಪಿಎಂಸಿ ಕಾಯ್ದೆಯ ತಿದ್ದುಪಡಿಗೆವಿರೋಧ

ಕಲಬುರಗಿ,ಜು.20- ರಾಜ್ಯದ ವಿಧಾನ ಮಂಡಲದ 150 ನೇ ಅಧೀವೇಶನದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಅವರು ಸಣ್ಣ/ಅತಿ ಸಣ್ಣ ರೈತ ವಿರೋಧಿ ಎಪಿಎಂಸಿ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿದರು. 2020 ರಲ್ಲಿ ಎಪಿಎಂಸಿ
ಕಾಯ್ದೆಯನ್ನು ಜಾರಿಗೆ ತಂದು ಸಣ್ಣ/ಅತಿ ಸಣ್ಣ ರೈತರು ತಾವು ಬೆಳೆದ ಬೆಳೆಯನ್ನು ಸ್ವತಂತ್ರವಾಗಿ ಮಾರಾಟ ಮಾಡುವ ಅವಕಾಶವನ್ನು ಒದಗಿಸಲಾಗಿತ್ತು.
ಈ ಕಾಯ್ದೆಯಿಂದ ರೈತರು ತಾವು ಬೆಳೆದ ಬೆಳೆಗೆ ಉತ್ತಮ ಬೆಲೆಯನ್ನು ಪಡೆಯುತ್ತಿದ್ದರು. ರೈತರು ಭಾರತದ ಬೆನ್ನೆಲುಬು. ಭಾರತದಲ್ಲಿ ಇಂದಿಗೂ ಸಹ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೃಷಿಯಿಂದ ಜೀವನ
ಮಾಡುತ್ತಿದ್ದಾರೆ. ಭಾರತದ ರೈತ ಸಾಲದಲ್ಲಿ ಹುಟ್ಟಿ, ಸಾಲದಲ್ಲಿ ಬೆಳೆದು, ಸಾಲದಲ್ಲಿ ಸಾಯುತ್ತಾನೆ ಎಂಬುದು ಇವತ್ತಿನವರೆಗೂ ಸತ್ಯ, ರೈತನೊಂದಿಗೆ ಮಾನ್ಸೂನ್ ಮತ್ತು ಮಾರ್ಕೆಟ್ ಎರಡೂ ಸಹ ತೊಂದರೆ ನೀಡುತ್ತಿವೆ. ಭಾರತದ ರೈತ ನಷ್ಟದ ನಂತರ ಉತ್ಪಾದನೆ ಚಟುವಟಿಕೆಯನ್ನು ನಿರಂತರವಾಗಿ ಮುಂದುವರಿಸುತ್ತಾನೆ. ಸ್ವಾತಂತ್ರ್ಯ ಪಡೆದು 75 ವರ್ಷಗಳ ಕಳೆದರು ಸಹ ರೈತರಿಗೆ ಒಂದು ಉತ್ತಮವಾದ ಮಾರುಕಟ್ಟೆ ಒದಗಿಸಲು ವಿಫಲರಾಗಿದ್ದೇವೆ.
ಸರ್ಕಾರ ಸಣ್ಣ/ಅತಿ ಸಣ್ಣ ರೈತರ ವಿರೋಧಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಡಾ. ತಳವಾರ ಸಾಬಣ್ಣಾ ಅವರು ಸಚಿವರನ್ನು ಆಗ್ರಹಿಸಿದರು
ಸಣ್ಣ/ಅತಿ ಸಣ್ಣ ರೈತರು ಅಸಂಘಟಿತ, ಅಸಹಾಯಕರಾಗಿ ತಾವು ಮಾಡಿರುವ ಸಾಲಕ್ಕಾಗಿ ತಮ್ಮ ಬೆಳೆಯನ್ನು ಮಾರುತ್ತಾರೆ. ಬಿತ್ತುವಾಗ ಬೀಜ, ಗೊಬ್ಬರ ಪಡೆಯಲು ಸಾಲ ತರಗೆದುಕೊಂಡು ಬಿತ್ತನೆಯಾದ ನಂತರ ಬೆಳೆಯನ್ನು ಅವರಿಗೆ ಮಾರಾಟ ಮಾಡುತ್ತಾರೆ.
ಎಪಿಎಂಸಿಯಲ್ಲಿ ಸಣ್ಣ ರೈತರು ತಮ್ಮ ಉತ್ಪಾದನೆಯನ್ನು ತಂದು ಮಾರಾಟ ಮಾಡುವುದಿಲ್ಲ. ಕಾರಣ, ಸಾರಿಗೆ ವೆಚ್ಚ, ಮಧ್ಯವರ್ತಿಗಳು/ದಲ್ಲಾಳಿಗಳು ಮತ್ತು ವ್ಯಾಪರಿಗಳ ಹಾವಳಿಯಿಂದ ರೈತರು ಶೋಷಣೆ ಅನುಭವಿಸುತ್ತಿದ್ದಾರೆ. 2.5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರ ಸಂಖ್ಯೆ ಶೇಕಡಾ 54 ರಷ್ಟಿದೆ. ಕೃಷಿ ಭೂಮಿ ಸಣ್ಣ ಸಣ್ಣ ತುಂಡುಗಳಾಗಿ ಹಂಚಲ್ಪಟ್ಟಿರುವುದರಿಂದ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತಿದೆ. 5 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವ ರೈತರ ಸಂಖ್ಯೆ ಶೇಕಡಾ 56 ರಷ್ಟಿದೆ. ಮಧ್ಯಮ/ದೊಡ್ಡ ರೈತರು ಎಪಿಎಂಸಿಯಲ್ಲಿ ಬೆಳೆಯನ್ನು ಮಾರಾಟ ಮಾಡುತ್ತಾರೆ. ಪ್ರಸ್ತುತ ತಿದ್ದುಪಡಿ ಮಾಡುತ್ತಿರುವ ಎಪಿಎಂಸಿ ಕಾಯಿದೆ ಕೇವಲ ಮಧ್ಯವರ್ತಿಗಳು/ದಲ್ಲಾಳಿಗಳು ಮತ್ತು ವ್ಯಾಪಾರಿಗಳಿಗೆ ಹಾಗೂ ಎಪಿಎಂಸಿ ಕಮಿಟಿಯ ರಾಜಕೀಯ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ತರಲಾಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಅನುಕೂಲವಾಗಿ, ಅವರು ಸಣ್ಣ/ಅತಿ ಸಣ್ಣ ರೈತರನ್ನು ಶೋಷಣೆ ಮಾಡುತ್ತಾರೆ.
ಈ ಕಾಯಿದೆಯಿಂದ ಸಣ್ಣ/ಅತಿ ಸಣ್ಣ ರೈತರ ಸ್ವಾತಂತ್ರ್ಯ ಕುಸಿದುಕೊಂಡು ಅವರನ್ನು ದಲ್ಲಾಲಿಗಳ ಕಪಿಮುಷ್ಟಿಗೆ ತಳ್ಳುವ ಆತಂಕವಿದೆ. ಸಣ್ಣ/ಅತಿ ಸಣ್ಣ ರೈತರ ವಿರೋಧಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಡಾ. ತಳವಾರ ಸಾಬಣ್ಣಾ ಅವರು ಸಚಿವರನ್ನು ಆಗ್ರಹಿಸಿದರು.