ರೈತ ವಿರೋಧಿ ಎನ್‍ಡಿಎ ಒಕ್ಕೂಟವನ್ನು ಸೋಲಿಸಿ: ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.01-ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಸೋಲಿಸುವ ಮೂಲಕ ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆದು ರೈತರ ಸಮುದಾಯವನ್ನು ಉಳಿಸಿ ಅಭಿಯಾನವನ್ನು ರಾಜ್ಯಾಧ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ ಎನ್.ಡಿ.ಎ ಒಕ್ಕೂಟವು ಮತ್ತೇ ಅಧಿಕಾರಕ್ಕೆ ಬರದಂತೆ ತಡೆಯಲು ರೈತ ಸಂಘ ತೀರ್ಮಾನಿಸಿದೆ. ಮಾ. 21 ರಂದು ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಎನ್‍ಡಿಎ ಒಕ್ಕೂಟವು ಅಧಿಕಾರಕ್ಕೆ ಬರುವುದನ್ನು ತಡೆಯಲು ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ-ರೈತ ಸಮುದಾಯವನ್ನು ಉಳಿಸಿ ಎಂಬ ಘೋಷಣೆಯಡಿ ಪ್ರಚಾರ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದರು.
10 ವರ್ಷದ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಆಡಳಿತದಲ್ಲಿ ರೈತ ಸಮುದಾಯವನ್ನು ನಿರ್ಲಕ್ಷ್ಯ ಮಾಡಿ ಇಡೀ ಕೃಷಿ ಕ್ಷೇತ್ರವನ್ನೇ ಕಾಪೆರ್Çೀರೇಟ್ ವಲಯಕ್ಕೆ ಒಪ್ಪಿಸುವಂತಹ ಕೆಟ್ಟ ನೀತಿಗಳು ರೂಪುಗೊಂಡಿವೆ. ಮತ್ತೇ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್.ಡಿ.ಎ ಒಕ್ಕೂಟ ಅಧಿಕಾರಕ್ಕೆ ಮರಳಿದಲ್ಲಿ ರೈತ ಕುಲ ಸಂಪೂರ್ಣ ನಾಶವಾಗುತ್ತದೆ. ಈ ಹಿನ್ನಲೆಯಲ್ಲಿ ಮಾರ್ಚ್ 03ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ರೈತ-ಕಾರ್ಮಿಕ ಮಹಾ ಪಂಚಾಯತ್‍ನಲ್ಲಿ ಎನ್.ಡಿ.ಎ ಅನ್ನು ಅಧಿಕಾರದಿಂದ ಕಿತ್ತೊಗೆಯಲು ದೇಶದ ರೈತರು ನಿರ್ಣಯ ಕೈಗೊಂಡಿದ್ದಾರೆ. ಈ ತೀರ್ಮಾನವನ್ನು ರಾಜ್ಯ ರೈತ ಸಂಘ ಎಲ್ಲಾ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗಳಿಗೂ, ಪ್ರತಿ ಕುಟುಂಬಕ್ಕೂ ತಲುಪಿಸಿ ಎನ್.ಡಿ.ಎ ವಿರುದ್ಧ ಮತ ಚಲಾಯಿಸಲು ರೈತ ಸಮುದಾಯಕ್ಕೆ ಕರೆ ನೀಡಲಾಗುವುದು ಎಂದು ತಿಳಿಸಿದರು.
ಎನ್.ಡಿ.ಎ ಒಕ್ಕೂಟದಲ್ಲಿರುವ ಜ್ಯಾತ್ಯಾತೀತ ಜನತಾದಳವು ಕೂಡ ರೈತ ಪರ ಪಕ್ಷವಾಗಿ ಉಳಿದಿಲ್ಲ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ಮಾರಕವಾದ ಶಾಸನಕ್ಕೆ ಮತ್ತು ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿ ತನ್ನ ರೈತವಿರೋಧಿ ನೀತಿಯನ್ನು ಬಹಿರಂಗವಾಗಿ ಪ್ರದರ್ಶಿಸಿದೆ. ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ದೆಹಲಿ ಸುತ್ತಾಮುತ್ತಾ ನಡೆದ ರೈತ ಆಂದೋಲನವನ್ನು ಬೆಂಬಲಿಸಲಿಲ್ಲ, ಜೆ.ಡಿ.ಎಸ್ ರೈತರ ಪಕ್ಷವೂ ಅಲ್ಲ ಜ್ಯಾತ್ಯಾತೀತ ಪಕ್ಷವೂ ಅಲ್ಲ ಎಂದು ಬಡಗಲಪುರ ನಾಗೇಂದ್ರ ದೂರಿದರು.
2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರೈತ ಸಂಘಟನೆಗಳು-ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಯುವಜನ, ವಿದ್ಯಾರ್ಥಿ ಮತ್ತು ಪ್ರಗತಿ ಪರ ಸಂಘಟನೆಗಳು ಪರಸ್ಪರ ಸಮನ್ವಯತೆಯಿಂದ ಮಾಡಿದ ಸಂಘಟನಾತ್ಮಕ ಪ್ರಯತ್ನದ ಪರಿಣಾಮವು ಕೂಡ ಬಿ.ಜೆ.ಪಿಯನ್ನು ವಿಧಾನಸೌಧದಿಂದ ತೊಲಗಿಸಲು ಕಾರಣವಾಗಿದೆ. ಈ ಲೋಕಸಭಾ ಚುನಾವಣೆಯಲ್ಲಿಯೂ ಈ ಪ್ರಯತ್ನವನ್ನು ಮತ್ತಷ್ಟು ವಿಸ್ತಾರದನೆಲೆಯಲ್ಲಿ ಮಾಡಲಾಗುವುದು ಎಂದರು. 10 ವರ್ಷದ ಮೋದಿ ಆಡಳಿತ ರೈತ-ಕಾರ್ಮಿಕ ಮತ್ತು ಜನ ಸಾಮಾನ್ಯರ ನೆಮ್ಮದಿಗೆ ಭಂಗ ತಂದಿದೆ. ಮತ್ತೆ ಇವರು ಅಧಿಕಾರಕ್ಕೆ ಏರಿದರೆ ದುಡಿಯುವ ವರ್ಗದ ಬದುಕು ಶಾಶ್ವತವಾಗಿ ನಾಶವಾಗುತ್ತದೆ. ನರೇಂದ್ರ ಮೋದಿಯವರ 10 ವರ್ಷದ ಆಡಳಿತದಲ್ಲಿ 100474 ಲಕ್ಷ ಜನ ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಎಂ.ಎಸ್.ಪಿ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ ಎಂದು ನರೇಂದ್ರ ಮೋದಿಯವರು ಹೇಳುತ್ತಿದ್ದಾರೆ. ಹೀಗಾಗಿ ರೈತ ಸಮುದಾಯ ಮೋದಿ ಅವರನ್ನು ಸೋಲಿಸಿ ಎಂದರು.
ಗೋಷ್ಠಿಯಲ್ಲಿ ರೈತ ಸಂಘದ ಉಪಾಧ್ಯಕ್ಷ ಎ.ಎಂ ಮಹೇಶ್ ಪ್ರಭು, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಭಾಸ್ಕರ್.ಸಿ, ಕಾರ್ಯಾಧ್ಯಕ್ಷ ಶಿವಪುರ ಮಹದೇವಪ್ಪ, ಶೈಲೇಂದ್ರ ಇದ್ದರು.