ರೈತ ಮುಖಂಡರುಗಳೊಂದಿಗೆ ತಹಸೀಲ್ದಾರ್ ಸೌಹಾರ್ದ ಸಭೆ

ಕೆ.ಆರ್.ಪೇಟೆ: ಮಾ.01:- ಆಡಳಿತದ ಬಗ್ಗೆ ಸಾರ್ವಜನಿಕರ ಸಲಹೆ ಸಹಕಾರಗಳನ್ನು ನಾನು ಮಾನ್ಯ ಮಾಡುತ್ತೇನೆ. ನಾನು ಮಾಡುವ ಕೆಲಸ ಕಾರ್ಯಗಳು ಸಾರ್ವಜನಿಕರ ವಿಮರ್ಶೆಗೆ ಒಳಪಡುವುದನ್ನು ನಾನು ಇಚ್ಚಿಸುತ್ತೇನೆ. ಜನರ ವಿಮರ್ಶೆಗೆ ಒಳಪಟ್ಟಾಗಲೇ ನಾನು ಉತ್ತಮ ಅಧಿಕಾರಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ನೂತನ ತಹಸೀಲ್ದಾರ್ ನಿಸರ್ಗಪ್ರಿಯ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿರುವ ಕಂದಾಯ ಇಲಾಖೆಯ ಸಭಾಂಗಣದಲ್ಲಿ ಅವರು ತಾಲೂಕು ರೈತಸಂಘದ ಮುಖಂಡರುಗಳೊಂದಿಗೆ ಸೌಹಾರ್ದ ಸಭೆ ನಡೆಸಿ ತಾಲೂಕಿನ ರೈತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದರು.
ದರಕಾಸು ಭುಮಿ ಹಂಚಿಕೆ ಸಂಬಂಧ ಈ ಹಿಂದೆ ನಡೆದಿರುವ ನಡಾವಳಿಗಳು ನನಗೆ ಸಮಾಧಾನ ತಂದಿಲ್ಲ. ನನ್ನದೇ ಆದ ರೀತಿಯಲ್ಲಿ ಯಾವುದೇ ರೀತಿಯ ಭ್ರ್ರಷ್ಟಾಚಾರಕ್ಕೆ ಆಸ್ಪದವಾಗದಂತೆ ದರಕಾಸು ಅರ್ಜಿಗಳ ವಿಲೇ ಮಾಡಲು ಕ್ರಮವಹಿಸುತ್ತೇನೆ. ಕಾನೂನಾತ್ಮಕವಾಗಿ ಮಾಡಲಾಗದ ಕೆಲಸಗಳನ್ನು ಮಾಡಿಸಿಕೊಡುತ್ತೇನೆಂದು ಹೇಳಿ ಮುಗ್ದ ರೈತರನ್ನು ವಂಚಿಸುವ ವಂಚಕರ ಜಾಲ ಇಲ್ಲಿ ಸಕ್ರಿಯವಾಗಿರುವುದು ನನ್ನ ಗಮನಕ್ಕೆ ಬಂದಿದೆ.
ಕಾನೂನಿನ ಅರಿವಿಲ್ಲದ ರೈತರು ಇಂತಹ ವಂಚಕರ ಜಾಲಕ್ಕೆ ಸಿಲುಕುತ್ತಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಮಾಡಲು ಅಸಾಧ್ಯವಾದ ಕೆಲಸಗಳನ್ನು ಮಾಡಿಕೊಡುತ್ತೇನೆಂದು ಹೇಳಿ ರೈತರಿಗೆ ದ್ರೋಹ ಮಾಡುವ ವ್ಯಕ್ತಿ ನಾನಲ್ಲ ಎಂದ ತಹಸೀಲ್ದಾರ್ ನಿಸರ್ಗಪ್ರಿಯ ಆರ್.ಟಿ.ಸಿ ತಿದ್ದುಪಡಿ ಮತ್ತು ಪೌತಿ ಖಾತೆಗಳನ್ನು ಸರಿಪಡಿಸಲು ಮೊದಲ ಆದ್ಯತೆ ನೀಡಿದ್ದೇನೆ. ಈಗಾಗಲೇ 700 ಕ್ಕೂ ಅಧಿಕ ಆರ್.ಟಿ.ಸಿ ತಿದ್ದುಪಡಿ ಅರ್ಜಿಗಳನ್ನು ವಿಲೇ ಮಾಡಿದ್ದೇನೆ.
ಪ್ರತಿ ಹೋಬಳಿಯಲ್ಲೂ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಮತ್ತು ಪೌತಿ ಖಾತೆ ಆಂದೋಲನ ಮಾಡಿ ರೈತರು ಅನಗತ್ಯವಾಗಿ ಕಛೇರಿಗೆ ಅಲೆಯದಂತೆ ಕ್ರಮವಹಿಸಲು ನಿರ್ಧರಿಸಿದ್ದೇನೆ. ಕೆರೆ ಒತ್ತುವರಿ ತೆರವಿಗೂ ಕ್ರಮವಹಿಸಿದ್ದು ಈಗಾಗಲೇ ತಾಲೂಕಿನ ಸಂತೇಬಾಚಹಳ್ಳಿಯ ಎರಡು ಕೆರೆಗಳು, ಬಳ್ಳೆಕೆ ಮತ್ತು ಬೂಕನಕೆರೆಯ ಕೆರೆಗಳ ಒತ್ತುವರಿ ತೆರವಿಗೆ ಕ್ರಮವಹಿಸಿದ್ದೇನೆ. ಚುನಾವಣೆ ಘೋಷಣೆಯಾಗುವ ಮುನ್ನ ಎಷ್ಷು ಸಾಧ್ಯವೋ ಅಷ್ಟು ರೈತರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿರುತ್ತೇನೆಂದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ ಈ ಹಿಂದಿನ ತಹಸೀಲ್ದಾರ್ ಎಂ.ವಿ.ರೂಪ ಅವರ ಆಡಳಿತದ ಅವಧಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು. ಕಂದಾಯ ಇಲಾಖೆಯಲ್ಲಿ 6 ಸಾವಿರಕ್ಕೂ ಹಳೆಯ ಅರ್ಜಿಗಳು ವಿಲೇಗಾಗಿ ಕಾದಿವೆ. ತಾಲೂಕು ಕಛೇರಿಯಲ್ಲಿ ರೈತರ ಸುಲಿಗೆ ನಡೆಯುತ್ತಿದ್ದು ಯಾವುದೇ ಟೇಬಲ್‍ನಲ್ಲಿಯೂ ಲಂಚವಿಲ್ಲದೆ ಫೈಲುಗಳು ಮುಂದೆ ಹೋಗುತ್ತಿಲ್ಲ. ಆರ್.ಟಿ.ಸಿ ತಿದ್ದುಪಡಿ, ಆಕಾರ್ ಬಂದ್ ಮತ್ತು ಆರ್.ಟಿ.ಸಿ ನಡುವೆ ತಾಳೆಯಾಗದಿರುವುದು, ಪೋಡಿ ವ್ಯತ್ಯಾಸ, ಕೆರೆ ಒತ್ತುವರಿ, ಸ್ಮಶಾನ ಒತ್ತುವರಿ ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ತಹಸೀಲ್ದಾರರ ಮುಂದಿಟ್ಟರಲ್ಲದೆ ರೈತರನ್ನು ಅನವಶ್ಯಕವಾಗಿ ಕಛೇರಿಗೆ ಅಲೆಯುವುದನ್ನು ತಪ್ಪಿಸಿದರೆ ಇದೇ ನಾಡಿನ ಅನ್ನದಾತರಿಗೆ ನೀವು ಮಾಡುವ ಬಹುದೊಡ್ಡ ಸೇವೆ ಎಂದರು. ಕಛೇರಿಗೆ ನಿತ್ಯ ಬರುವ ಅರ್ಜಿಗಳನ್ನು ಪರಿಶೀಲಿಸಿ ಅವುಗಳ ವಿಲೇಗೆ ಕ್ರಮವಹಿಸಿ. ನಾಡ ಕಛೇರಿಗಳಿಗೆ ದಿಢೀರ್ ಭೇಟಿ ನೀಡಿ ಕಡತ ಪರಿಶೀಲನೆ ಮತ್ತು ಕಛೇರಿಗೆ ಬಂದಿರುವ ರೈತರ ಸಮಸ್ಯೆಗಳನ್ನು ಆಲಿಸಿ. ನಿಮ್ಮ ಪ್ರಾಮಾಣಿಕ ಜನಸೇವೆಗೆ ರೈತಸಂಘ ಬೆನ್ನೆಲುಬಾಗಿ ನಿಲ್ಲುತ್ತದೆಂದರು.
ಒತ್ತಾಯ: ಪರಿಸರ ಇಲಾಖೆಯ ಅನುಮೋದನೆ ಪಡೆಯದೆ ಮತ್ತು ಪ್ರವಸೋದ್ಯಮ ಇಲಾಖೆಗೆ ಸೇರದಿದ್ದರೂ ಪ್ರವಾಸೋಧ್ಯಮ ಅಭಿವೃದ್ದಿಯ ಹೆಸರಿನಲ್ಲಿ ಹೊಸಹೊಳಲು ಚಿಕ್ಕಕೆರೆಯನ್ನು ಶೇ.50 ರಷ್ಟು ಮುಚ್ಚಲಾಗಿದೆ. ಇದರಿಂದ ಅಂತರ್ಜಲ ಭತ್ತಿ ಕೆರೆ ಸುತ್ತಮುತ್ತಲ ಕೊಳವೆಬಾವಿಗಳು ಸ್ಥಗಿತಗೊಂಡಿದ್ದು ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ. ನಿಯಮ ಮೀರಿ ನಡೆಯುತ್ತಿರುವ ಕೆರೆ ಅಭಿವೃದ್ದಿ ಕಾಮಗಾರಿಯ ಬಗ್ಗೆ ಕ್ರಮವಹಿಸುವಂತೆ ರೈತಸಂಘ ದೂರು ನೀಡಿದ್ದರೂ ಕ್ರಮವಹಿಸುತ್ತಿಲ್ಲ. ಇದರ ಬಗ್ಗೆ ತಕ್ಷಣ ಕ್ರಮ ವಹಿಸಿ ಕೆರೆಯನ್ನು ಉಳಿಸಿ ಎಂದು ಸಭೆಯಲ್ಲಿ ಒತ್ತಾಯಿಸಿದ ರೈತಸಂಘದ ಕಾರ್ಯಕರ್ತರು ಸಸಿ ನೆಡುವ ಹೆಸರಿನಲ್ಲಿ ತೋಡಿದ ಗುಂಡಿಗಳಲ್ಲಿಯೇ ಮತ್ತೆ ಮತ್ತೆ ಸಸಿನೆಟ್ಟಂತೆ ಮಾಡಿ ಸಾಮಾಜಿಕ ಅರಣ್ಯ ಇಲಾಖೆ ಸರ್ಕಾರದ ಕೋಟ್ಯಾಂತರ ರೂ ಅನುದಾನವನ್ನು ದುರ್ಭಳಕೆ ಮಾಡುತ್ತಿದೆ. ಇದರ ಬಗ್ಗೆ ಕ್ರಮ ವಹಿಸಬೇಕು. ಇದೇ ರೀತಿ ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಗ್ರಾಮದ ಸರ್ವೆ.ನಂ 53/2 ರ ಜಮೀನಿನ ಭೂ ದಾಖಲೆಗಳನ್ನು ಅಕ್ರಮವಾಗಿ ತಿದ್ದಿರುವ ಭೂಮಾಪಕ ಹೆಚ್.ಟಿ.ಕುಮಾರ್ ಅವರ ವಿರುದ್ದ ಇಲಾಖಾ ಶಿಸ್ತು ಕ್ರಮಕ್ಕೆ ವರದಿ ಮಡುವಂತೆ ತಹಸೀಲ್ದಾರ್ ನಿಸರ್ಗಪ್ರಿಯ ಅವರನ್ನು ಆಗ್ರಹಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರಾಜ್ಯ ರೈತಸಂಘದ ಮುಖಂಡ ಕೆ.ಆರ್.ಜಯರಾಂ, ಜಿಲ್ಲಾ ರೈತಸಂಘದ ಮುಖಂಡ ಎಲ್.ಬಿ.ಜಗದೀಶ್, ರೈತ ಮುಖಂಡರಾದ ಬೂಕನಕೆರೆ ನಾಗರಾಜು, ಹೊನ್ನೇಗೌಡ, ಸ್ವಾಮೀಗೌಡ, ನಾರಾಯಣಸ್ವಾಮಿ, ಕೃಷ್ಣಾಪುರ ರಾಜಣ್ಣ, ಹಿರೀಕಳಲೆ ಬಸವರಾಜು, ಕೇಶವಮೂರ್ತಿ, ಅರುಣ ಕುಮಾರ್, ನಗರೂರು ಕುಮಾರ್, ಚೌಡೇನಹಳ್ಳಿ ಕೃಷ್ಣೇಗೌಡ, ಕರೋಟಿ ತಮ್ಮಯ್ಯ, ಮಾಕವಳ್ಳಿ ರವಿ, ನಗರೂರು ಕುಮಾರ್, ಮಂಚನಹಳ್ಳಿ ನಾಗೇಗೌಡ ಸೇರಿದಂತೆ ಹಲವರಿದ್ದು ಮಾತನಾಡಿದರು.