ರೈತ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು

ಸಂಜೆವಾಣಿ ವಾರ್ತೆ
ನಮಜನಗೂಡು : ಜು.07:- ಗ್ರಾಮೀಣ ಭಾಗಗಳಲ್ಲಿ ರೈತ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸಂಘಟನೆಯಲ್ಲಿ ತೊಡಗಿಕೊಂಡು ಪ್ರಭುದ್ದತೆ ಮೆರೆದಿದ್ದಾರೆ ಎಂದು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
ತಾಲ್ಲೂಕಿನ ಅಹಲ್ಯ ಗ್ರಾಮದಲ್ಲಿ ತಾಲ್ಲೂಕು ರೈತ ಸಂಘ ಗುರುವಾರ ಆಯೋಜಿಸಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಪ್ರತಿದಿನ ಗೌರವಯುತ ಜೀವನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ,ಆತ್ಮಾಭಿಮಾನದ ಬದುಕು ಕಟ್ಟಿಕೊಳ್ಳಲು, ಆರ್ಥಿಕವಾಗಿ ಸಬಲರಾಗಲು,ರಚನಾತ್ಮಕವಾಗಿ ಹಳ್ಳಿಗಳು ಸಂಪತ್ತನ್ನು ಸೃಷ್ಠಿಮಾಡಿಕೊಳ್ಳುವ ಮೂಲಕ ತಮ್ಮ ಬೆಳೆಗಳಿಗೆ, ಹೈನು ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ಸ್ವಾಭಿಮಾನದಿಂದ ಬದುಕುವುದನ್ನು ರೈತ ಸಂಘ ಕಲಿಸುತ್ತಿದೆ, ಪ್ರತಿ ಗ್ರಾಮದಲ್ಲಿ ರೈತ ಸಂಘದ ಮಹಿಳಾ ಘಟಕಗಳ ಅವಶ್ಯಕತೆಯಿದೆ,ಹೆಣ್ಣನ್ನು ತುಚ್ಛವಾಗಿ ಕಾಣುವ ಮನು ಸ್ಮೃತಿಯ ಭಾಗವಾಗಿ ವ್ಯವಸ್ಥೆ ಬೆಳೆದಿದೆ, ಇವತ್ತಿಗೂ ಕೂಡ ಹೆಣ್ಣಿನ ಮೇಲೆ ನಡೆಯುವ ದೌಜನ್ರ್ಯ, ಅತ್ಯಾಚಾರಗಳು ಶೇ 10 ರಷ್ಟು ಮಾತ್ರ ಹೊರಗೆ ಬರುತ್ತವೆ, ಶೇ 90 ರಷ್ಟು ಮುಚ್ಚಿಹೋಗುತ್ತವೆ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಮರೆಸಲು ಇದೆ ಮನು ಸ್ಮೃತಿಯಂತೆ ಏಲ್ಲ ನದಿಗಳಿಗೆ ಹೆಂಗಸರ ಹೆಸರನ್ನು ಇಡಲಾಗಿದೆ. ಗಂಡಿಗೆ ಸಲ್ಲುವ ಎಲ್ಲ ಹಕ್ಕುಗಳು ಹೆಣ್ಣಿಗೆ ಸಮನಾಗಿ ಸಿಗಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿ ಪ್ರತಿ ಹಳ್ಳಿಗಳಲ್ಲಿ ತಮ್ಮ ಹಕ್ಕುಗಳನ್ನು ಪಡೆಯಲು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವತ್ತ ಮಹಿಳೆಯರು ಮುಂದಾಗಬೇಕು. ಅಹಲ್ಯ ಗ್ರಾಮದಲ್ಲಿ ಸ್ಮಶಾನ ಭೂಮಿ ಪಡೆಯಲು ಹೋರಾಟ ರೂಪಿಸಿದ ರೈತ ಸಂಘ ಕೇವಲ ಬಂದು ವಾರದಲ್ಲಿ ತಾಲ್ಲೂಕು ಆಡಳಿತದ ಕಿವಿ ಹಿಂಡಿ ಸಮಸ್ಯೆಗೆ ಪರಿಹಾರ ಕಂಡು ಕೊಂಡಿತ್ತು, ಗ್ರಾಮಕ್ಕೆ ಮಂಜೂರಾಗಿದ್ದ 90 ಲಕ್ಷ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಡೆದ ಅವ್ಯವಹಾರವನ್ನು ತಡೆದು ಗುಣಮಟ್ಟದ ರಸ್ತೆ ನಿರ್ಮಾಣವಾಗುವುದಕ್ಕೆ ರೈತರು ಸಂಘಟಿತರಾಗಿ ನಡೆಸಿದ ಹೋರಾಟ ಮರೆಯುವಂತಿಲ್ಲ, ವಸತಿ ಯೋಜನೆ ಮಂಜೂರು ಮಾಡಲು ರಾಂಪುರ ಗ್ರಾ.ಪಂ.ಯಲ್ಲಿ ನಡೆಯುತ್ತಿದ್ದ ಭಷ್ಟಾಚಾರವನ್ನು ತಡೆಯಲು ಒಂದು ದಿನ ಪೂರ್ತಿ ಗ್ರಾ.ಪಂ.ಗೆ ಬೀಗ ಜಡಿದು ಹೋರಾಟ ಮಾಡಿ, ನಿಜವಾದ ಫಲಾನುಭವಿಗಳಿಗೆ ನ್ಯಾಯ ಒದಗಿಸಲಾಗಿತ್ತು. ರೈತರಿಗೆ ಅನ್ಯಾವಾದಾಗ ಪ್ರತಿಭಟಿಸಿ, ನ್ಯಾಯ ಪಡೆಯಲು ಪ್ರತಿ ಗ್ರಾಮಗಳಲ್ಲಿ ರೈತ ಸಂಘದ ಘಟಕಗಳನ್ನು ಸ್ಥಾಪಿಸಿ ಸಂಘಟನೆಯನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹಿಮ್ಮಾವು ರಘು, ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್,ಅನುಸೂಯಮ್ಮ, ಸವಿತಾ, ಲಕ್ಷ್ಮಿ,ಗೌರಮ್ಮ,ರಾಜಮ್ಮ,ನಿಂಗಮ್ಮ, ಸಿಶೇಲಮ್ಮ, ಸೌಭಾಗ್ಯ, ಜಯಮ್ಮ, ಕರಿಗೌಡ, ವೇಣುಗೋಪಾಲ್ ಉಪಸ್ಥಿತರಿದ್ದರು.