ರೈತ ಪರ ಸಮಸ್ಯೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರಕಾರದ ವಿರುದ್ದ ಬೃಹತ್ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಸೆ.9: ಬಿಜೆಪಿ ರೈತ ಮೋರ್ಚಾ ಬಬಲೇಶ್ವರ ವತಿಯಿಂದ ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲದ ಸಮಸ್ಯೆ, ವಿದ್ಯುತ್ ಅಭಾವ ರೈತರ ಪಂಪಸೆಟ್‍ಗಳಿಗೆ ಅನಿಯಮಿತ ಲೋಡ ಶೆಡ್ಡಿಂಗ್ ರೈತಪರ ಯೋಜನೆ ರದ್ದುಗೊಳಿಸಿರುವುದು ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವಂತೆ ಮೆರವಣಿಗೆ ಮೂಲಕ ಶ್ರೀ ಗುರುಪಾದೇಶ್ವರ ಬೃಹನ್ಮಠದಿಂದ ಗಾಂಧಿ ಸರ್ಕಲ್, ಶಾಂತವೀರ ಸರ್ಕಲ್ ಮಾರ್ಗವಾಗಿ ತಹಶೀಲ್ದಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಮೋಚಾ ಕಾರ್ಯದರ್ಶಿಗಳಾದ ಸಂಜಯಗೌಡ ಬಿ. ಪಾಟೀಲ (ಕನಮಡಿ) ಮಾತನಾಡಿ, ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣವು ಕುಸಿತ ಕಂಡಿದ್ದು, ಇದರಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಆತಂಕ ಉಂಟಾಗಿದೆ. ಅದರ ಜೊತೆಗೆ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವದಿಂದ ರೈತರ ಪಂಪಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕಾಗಿತ್ತು. ಆದರೆ ಇತ್ತೀಚೆಗೆ ಅನಿಯಮಿತ ಲೋಡ ಶೆಡ್ಡಿಂಗ್‍ಗಳ ಪರಿಣಾಮ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರಕಾರ ವಿಫಲವಾಗಿದೆ. ಹೀಗಾಗಿ ಬರಗಾಲಕ್ಕೆ ತುತ್ತಾಗಿರುವ ರೈತರು ಈಗಾಗಲೇ ಶೇ. 80% ಬೆಳೆಗಳನ್ನು ಬಿತ್ತನೆ ಮಾಡಿದ್ದು ಅವುಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆ ಉಂಟಾಗಿ ರೈತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತು ಬಬಲೇಶ್ವರ ಕ್ಷೇತ್ರದಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಾಗೂ ಕಬ್ಬು ತೊಗರೆ ಮುಂತಾದ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆ ಸಿಗುವಂತೆ ಅಗಬೇಕು. ಹಾಗೂ ಒಣ ದ್ರಾಕ್ಷಿಗೆ ಸೂಕ್ತವಾದ ಬೆಲೆ ನೀಡಬೇಕು ಅಂದರೆ ಕನಿಷ್ಠ ಕೆಜಿಗೆ ರೂ. 250 ನಿಗದಿ ಪಡಿಸಬೇಕು ಕೃಷ್ಣಾ ಮುಳಗಡೆ ಸಂತ್ರಸ್ತರಿಗೆ ಹಿಂದಿನ ಸರಕಾರ ನಿಗದಿಪಡಿಸಿದ ಬೆಲೆ ನೀಡಬೇಕು ರೈತರ ಜಮೀನಗಳ ಒಟ್ಟುಗೂಡಿಸುವ ವಿಧಾನವನ್ನು ಸರಳಿಕರಿಸಬೇಕು. ಬೆಳೆ ವಿಮಾ ಹಾಗೂ ಬೆಳೆ ಪರಿಹಾರ ಒದಗಿಸಬೇಕು ಎಂದರು.
ಮಾಜಿ ಜಿ.ಪಂ. ಸದಸ್ಯರಾದ ಮಲ್ಲು ಆ. ಕನ್ನೂರ ಮಾತನಾಡಿ, ಈ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಹಲವಾರು ರೈತಪರ ಯೋಜನೆಗಳಾದ ಕಿಸಾನ ಸಮ್ಮಾನ ನಿಧಿ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ ಯೋಜನೆ, ರೈತ ಸಂಪದ ಯೋಜನೆ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು ಜಿಲ್ಲೆಗೊಂದು ಗೋಶಾಲೆ ಯೋಜನೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಈ ಎಲ್ಲ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು 139 ಜನ ರೈತರ ಆತ್ಮಹತ್ಯೆ ಪ್ರಕರಣಗಳ ವರದಿಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದರು.
ಈರಣ್ಣ ಶಿರಮಗೊಂಡ, ಮಂಡಲ ಪ್ರಧಾನ ಕಾರ್ಯದರ್ಶಿ ವಿಠ್ಠಲ ಕಿರಸೂರ ಮಂಡಲ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಎಲ್ಲ ವಿಷಯಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು ಗಮನ ಹರಿಸುವ ಮೂಲಕ ತಕ್ಷಣ ರೈತರ ಸಹಾಯಕ್ಕೆ ಬರಬೇಕಾದ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ರೈತರ ಪಂಪಸೆಟ್‍ಗಳಿಗೆ ಉಂಟಾಗಿರುವ ಅನಿಯಮಿತ ಲೋಡ್ ಶೆಡ್ಡಿಂಗ್ ರದ್ದು ಪಡಿಸಿ, ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುವುದು ಸೇರಿದಂತೆ ಮಳೆಯ ಅಭಾವದಿಂದ ಉಂಟಾಗಿರುವ ಬರಗಾಲ ಸ್ಥಿತಿ ನಿವಾರಣೆಗೋಸ್ಕರ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಹಾಗೂ ರೈತರ ಆತ್ಮಹತ್ಯೆಯಂತಹ ಅನಾಹುತಗಳಿಗೆ ಅಸ್ಪದಕೊಡದಿರುವ ರೀತಿಯಲ್ಲಿ ರೈತ ವರ್ಗಕ್ಕೆ ಧೈರ್ಯ ತುಂಬುವ ಮತ್ತು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದ್ದು ಅತ್ಯಂತ ಅವಶ್ಯಕವಾಗಿದೆ. ಸರ್ಕಾರ ಈ ಬಗ್ಗೆ ಯುದ್ದೋಪಾದಿಯಲ್ಲಿ ಕ್ರಮಕೈಗೊಂಡು ರೈತರ ನೆರವಿಗೆ ಧಾವಿಸಬೇಕಾಗಿದ್ದು ಅತ್ಯಂತ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಜುಗೌಡ ಎಸ್. ಪಾಟೀಲ, ಉಮೇಶ ಕೊಳಕೂರ, ಶಿವಾನಂದ ದಳವಾಯಿ, ಬಸವರಾಜ ಕುರುವಿನಶೆಟ್ಟಿ, ಕಲ್ಮೇಶ ಹಿರೇಮಠ, ರಾಮು ಜಾಧವ, ಎಂ.ಬಿ. ಜಂಗಮಶೆಟ್ಟಿ, ಮಹಾವೀರ ಮಾಯಪ್ಪಗೋಳ (ನಿಡೋಣಿ) ಗುರುಪಾದ ಬಾಗಿ, ಕಾಂತುಗೌಡ ಪಾಟೀಲ (ಅರಕೇರಿ) ಪ್ರೇಮಾನಂದ ಕಣಮುಚನಾಳ (ಬಾಬಾನಗರ) ಸಿದರಾಯ ಜಂಗಮಶೆಟ್ಟಿ, ಚನ್ನಬಸಪ್ಪ ಲಂಕೇಪ್ಪಗೋಳ, ಶಾಂತವೀರ ಕೊಕರೆ, ಪರಸು ಹಾವಡಿ, ಸತೀಶ ಪತ್ತಾರ, ಈರಣ್ಣ ಅವಟಿ, ಶ್ರೀಶೈಲ ಕೊಟ್ಯಾಳ, ಶೇಖರ ಬರಗಿ, ಪ್ರಶಾಂತ ಬಿರಾದಾರ, ಪಪ್ಪುಗೌಡ ಬಿರಾದಾರ, ಸಂತೋಷ ತಮಗೊಂಡ, ಪ್ರಕಾಶ ಶಿರಮಗೊಂಡ, ಗುರು ಪಟ್ಟಣ, ದುಂಡಪ್ಪ ಉಳ್ಳಾಗಡ್ಡಿ, ಪ್ರಕಾಶಗೌಡ ಬಿರಾದಾರ, ಪ್ರವೀಣ ತಮಗೊಂಡ, ಮತ್ತಿತರರು ಭಾಗವಹಿಸಿದ್ದರು.