ರೈತ ನಂಜೇಗೌಡ ಆತ್ಮಹತ್ಯೆ: ಕುಟುಂಬದವರಿಗೆ ಕೆ.ಸಿ.ನಾರಾಯಣಗೌಡ ಸಾಂತ್ವನ

ಕೆ.ಆರ್.ಪೇಟೆ.ನ.09: ತಾಲೂಕಿನ ಕಿಕ್ಕೇರಿ ಹೋಬಳಿಯ ಚೌಡೇನಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆಯಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ನಂಜೇಗೌಡರ ಮನೆಗೆ ಭೇಟಿ ನೀಡಿದ ಪೌರಾಡಳಿತ ರೇಷ್ಮೆ ಮತ್ತು ತೋಟಗಾರಿಕೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ವೈಯಕ್ತಿಕ ಧನಸಹಾಯ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ರೈತರು ಎಂತಹ ಕಷ್ಟವೇ ಬರಲಿ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಸರ್ಕಾರ ಈಗಾಗಲೇ ಬ್ಯಾಂಕುಗಳಿಗೆ ಖಾಸಗಿ ಮೈಕ್ರೋ ಫೈನಾನ್ಸ್ ಗಳಿಗೆ ಕೊರೋನಾ ಹಿನ್ನೆಲೆಯಲ್ಲಿ ಸಾಲ ಪಡೆದವರ ಮೇಲೆ ವಸೂಲಿಗಾಗಿ ಒತ್ತಡ ಹೇರಬಾರದು ಎಂದು ಸೂಚನೆಯನ್ನು ಕೂಡ ನೀಡಿರುತ್ತೇವೆ ಇಂಥ ವಿಷಯಕ್ಕೆ ಯಾವ ರೈತರು ಹೆದರದೆ ಧೈರ್ಯವಾಗಿರಬೇಕು ಇದ್ದು ಸಮಸ್ಯೆಯನ್ನು ನಿಭಾಯಿಸಬೇಕು ಎಂದು ಸಚಿವರು ರೈತರಲ್ಲಿ ಮನವಿ ಮಾಡಿದರು.
ರೈತರಿಗೆ ಸಾಲ ನೀಡಿರುವ ಬ್ಯಾಂಕುಗಳು ಖಾಸಗಿ ಮೈಕ್ರೋ ಫೈನಾನ್ಸ್ ಗಳ ವ್ಯವಸ್ಥಾಪಕರು ಸಾಲ ವಸೂಲಿಗಾಗಿ ಯಾರಿಗೂ ಕಿರುಕುಳ ನೀಡಬಾರದು ಕೊರೋನಾ ಹಿನ್ನೆಲೆಯಲ್ಲಿ ವ್ಯವಹಾರಗಳು ಸರಿಯಾಗಿ ನೆಡೆಯದೆ ರೈತರು ತೊಂದರೆಗೊಳಗಾಗಿದ್ದಾರೆ ಎಲ್ಲವೂ ಸರಿಯಾಗುವ ತನಕ ಸಾಲಗಾರರೊಂದಿಗೆ ಸಾಲ ವಸೂಲಿ ಮಾಡುವಾಗ ಹೊಂದಾಣಿಕೆಯಿಂದ ವ್ಯವಹರಿಸಬೇಕೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮನ್ ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.