ಕಲಬುರಗಿ,ಮಾ.26: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕೃಷಿ ಸಾಲ ವಸೂಲಾತಿ ಪದ್ದತಿಯನ್ನು ವಿರೋಧಿಸಿ ರಾಜ್ಯಾದ್ಯಂತ ರೈತ ಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಯಾತ್ರೆ ನಗರಕ್ಕೆ ಆಗಮಿಸಿದೆ ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ್ ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6ರಂದು ಬಳ್ಳಾರಿಯಿಂದ ಆರಂಭವಾದ ಯಾತ್ರೆಯು ಚಿಕ್ಕಬಳ್ಳಾಪುರ, ಕೋಲಾರ್, ದೊಡ್ಡಬಳ್ಳಾಪುರ, ತುಮಕೂರು, ಶಿವಮೊಗ್ಗ, ಸಾಗರ್, ಚಿಕ್ಕಮಗಳೂರು, ಮಂಗಳೂರು, ಸೋಮವಾರಪೇಟೆ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ್, ಚಿತ್ರದುರ್ಗ, ದಾವಣಗೆರೆ, ಹೊಸಪೇಟೆ, ಕೊಪ್ಪಳ್, ಯಾದಗಿರಿ ಮುಗಿಸಿ ನಗರಕ್ಕೆ ಆಗಮಿಸಿದೆ. ಮಾರ್ಚ್ 26ರಂದು ಬೀದರ್, 27ರಂದು ರಾಯಚೂರಿಗೆ ಯಾತ್ರೆ ತೆರಳಲಿದೆ ಎಂದರು.
ಪ್ರಕೃತಿ ವಿಕೋಪಗಳಿಂದ ಸತತ ಮೂರು ವರ್ಷಗಳಿಂದ ರಾಜ್ಯದ ರೈತರು ಬೆಳೆದ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಕೋವಿಡ್‍ನಿಂದ ರೈತ ಬೆಳೆದ ಬೆಳೆಗಳಿಗೆ ಉತ್ತಮ ದರ ಸಿಗದೇ ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಹಾಗಾಗಿ ಕೃಷಿ ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆಯೇ ಪರಿಹಾರವಲ್ಲ, ಹೋರಾಟವೊಂದೇ ಪರಿಹಾರ ಎಂದುಕೊಂಡು ಹೋರಾಟವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಭಾರತ ಸರ್ಕಾರದಿಂದ ಸ್ಥಾಪಿತವಾದ ಎಸ್‍ಬಿಐನಂತಹ ರಾಷ್ಟ್ರೀಕೃತ ಬ್ಯಾಂಕುಗಳು ರೈತರು ಪಡೆದಿರುವ ಸಾಲದ ಅಸಲಿನ ಶೇಕಡಾ 10ರಷ್ಟು ರೈತರಿಂದ ಕಟ್ಟಿಸಿಕೊಂಡು ಉಳಿದ ಸಾಲವನ್ನು ಮನ್ನಾ ಮಾಡಿದೆ. ಈ ವಿಷಯದಲ್ಲಿ ಬ್ಯಾಂಕ್‍ನವರು ನಿಷ್ಠುರವಾಗಿ ನಡೆದುಕೊಂಡು ರೈತರ ಕೃಷಿ ಸಾಲಕ್ಕೆ ಯಾವುದೇ ರಿಯಾಯಿತಿ, ಮನ್ನಾ ಯೋಜನೆಯನ್ನು ರೂಪಿಸಿಲ್ಲ ಮತ್ತು ಸಾಲ ವಸೂಲಾತಿ ಸಲುವಾಗಿ ನ್ಯಾಯವಾದಿಗಳ ಮೂಲಕ ಲೀಗಲ್ ನೋಟಿಸ್‍ಗಳನ್ನು ನೀಡಿ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೂಡ ಭಾರತ ಸರ್ಕಾರದಿಂದ ಸ್ಥಾಪಿತವಾದ ಬ್ಯಾಂಕ್. ಆದಾಗ್ಯೂ, ರೈತರ ವಿಷಯದಲ್ಲಿ ಸಾಲ ವಸೂಲಾತಿಯಲ್ಲಿ ಬ್ಯಾಂಕ್ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಆ ಕುರಿತು ಕಳೆದ ಒಂದು ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಆ ನಿಮಿತ್ಯ ಮಾರ್ಚ್ 29ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆರ್. ಮಾಧವರೆಡ್ಡಿ, ಸಾ. ರಘುನಾಥ್, ಹರಳಾಪುರ ಮಂಜೇಗೌಡ್ರು, ಮಲ್ಲಿಕಾರ್ಜುನರೆಡ್ಡಿ, ಸಿದ್ದನಗೌಡ, ಶರಣಪ್ಪ ದೊಡ್ಡಮನಿ, ಭಾಸ್ಕರರಾವ್ ವಕೀಲರು, ಬಸವರಾಜಸ್ವಾಮಿ, ಕೆ. ಬಸವರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.