
ಬಂಗಾರಪೇಟೆ, ಮಾ೧೭: ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡಿ ಜೀವನ ನಡೆಸುತ್ತಿದ್ದ ಜಮೀನಿನಲ್ಲಿ ಇದ್ದಕ್ಕಿದ್ದ ಹಾಗೆ ಪಕ್ಕದ ಗ್ರಾಮಸ್ಥನೋರ್ವ ಆಗಮಿಸಿ ಜಮೀನಿನಲ್ಲಿ ಬೆಳೆದಿದ್ದ ಆಲೂಗಡ್ಡೆ ಬೆಳೆಯನ್ನು ನಾಶ ಮಾಡಿ ಧಮ್ಕಿ ಹಾಕಿ ಹಲ್ಲೆ ಮಾಡಿದ ಪರಿಣಾಮ ರೈತ ಅಜ್ಮಲ್ ಮತ್ತು ಆತನ ಕುಟುಂಬ ಕೈಯಲ್ಲಿ ವಿಷದ ಬಾಟಲಿಗಳನ್ನು ಹಿಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.
ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಹುರ್‍ಲಹಳ್ಳಿ ಸಮೀಪದ ಕದರೀಪುರ ಗ್ರಾಮದ ರೈತ ಅಜ್ಮಲ್ ಮತ್ತು ಈತನ ಕುಟುಂಬ ಹಲ್ಲೆಗೊಳಗಾದವರು. ಅನಾದಿಕಾಲದಿಂದಲೂ ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಹೀಗಿರುವಾಗ ಪಕ್ಕದ ಅತ್ತಿಗಿರಿ ಗ್ರಾಮದ ವಾಸಿ ಚಲಮಪ್ಪ ಅವರ ಪತ್ನಿ ಮತ್ತು ಕುಟುಂಬದವರಾದ ಪ್ರಸನ್ನ ಮುಂತಾದವರು ಪದೇ ಪದೇ ನಮ್ಮ ಜಮೀನಿನ ಕಡೆ ಬಂದು ನಮಗೆ ಮಂಜೂರಾಗಿದೆ ಈ ಭೂಮಿ ನಮಗೆ ಸೇರಬೇಕಾದದ್ದು ಎಂದು ವಿನಾ ಕಾರಣ ನಮ್ಮ ಮೇಲೆ ದಮ್ಕಿ ಹಾಕಿ ಹಲ್ಲೆ ಮಾಡುತ್ತಿದ್ದಾರೆಂದು ರೈತ ಅಜ್ಮಲ್ ಆರೋಪಿಸಿದರು.
ನಾನು ನಮ್ಮ ತಾತ ಮುತ್ತಾತ್ತನ ಕಾಲದಿಂದ ಈ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡಿಕೊಂಡಿದ್ದೇನೆ. ಹಾಗೂ ಈ ಜಮೀನಿನಲ್ಲಿ ವಿಧವಿಧವಾದ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಇತ್ತೀಚೆಗೆ ಎರಡು ಎಕರೆ ಭೂಮಿಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದು ಇನ್ನೇನು ಪಸಲು ಪ್ರಾರಂಭವಾಗಿತ್ತು ಅಷ್ಟರಲ್ಲಿ ಚಲಮಪ್ಪ ಎಂಬುವರು ಈ ಭೂಮಿ ನಮಗೆ ಸೇರಿದ್ದು ನನಗೆ ಮಂಜೂರಾಗಿದೆ ಸರ್ವೇ ಕಾರ್ಯ ಮುಗಿಸಿದ್ದೇನೆ, ಈ ಭೂಮಿಯಲ್ಲಿ ಯಾರು ಏನು ಮಾಡಬಾರದೆಂದು ಗ್ರಾಮದವರನ್ನೆಲ್ಲಾ ಕರೆಸಿ ನಮ್ಮ ಮೇಲೆ ದೈಹಿಕ ಹಲ್ಲೆ ಮಾಡಿ ಆಲೂಗಡ್ಡೆ ಬೆಳೆಗೆ ಹಾಕಿದ್ದ ಎಲ್ಲಾ ಹನಿ ನೀರಾವರಿ ಡ್ರಿಪ್ ಪೈಪುಗಳನ್ನು ನಾಶ ಪಡಿಸಿ ಲಕ್ಷಾಂತರ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ. ಈ ವಿಚಾರವಾಗಿ ನಾವು ಬೂದಿಕೋಟೆ ಪೋಲಿಸ್ ಠಾಣೆಗೆ ಮತ್ತು ತಹಸಿಲ್ದಾರರ ಗಮನಕ್ಕೆ ತಂದಿದ್ದೇವೆಂದು ತಿಳಿಸಿದರು.
ಈಗಾಗಲೇ ತಹಸಿಲ್ದಾರರು ನಮ್ಮ ದೂರನ್ನು ಪರಿಶೀಲಿಸಿದ್ದು ಅವರ ಹೆಸರಿಗೆ ಮಂಜೂರಾಗಿರುವ ಜಮೀನು ಖೊಟ್ಟಿಯಾಗಿರುತ್ತದೆಂದು ಮಾನ್ಯ ಸಹಾಯಕ ಕಮೀಷನರ್, ಕೋಲಾರ ರವರಿಗೆ ಲಿಖಿತವಾಗಿ ತಿಳಿಸಿರುತ್ತಾರೆ. ಆದರೂ ಪದೇ ಪದೇ ಚಲಮಪ್ಪ ಎಂಬುವರು ನಮ್ಮ ತೋಟದ ಬಳಿ ಗ್ರಾಮಸ್ಥರನ್ನೆಲ್ಲಾ ಕರೆಸಿ ನಮ್ಮ ಮೇಲೆ ಹಲ್ಲೆ ಮಾಡುವುದಲ್ಲದೆ ಪ್ರಾಣ ಬೆದರಿಕೆಯನ್ನು ಹಾಕುತ್ತಿದ್ದಾರೆ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತನಾದ ಅಜ್ಮಲ್, ಪತ್ನಿ ಶಾತಾಜಿ ಬೀ, ಮೆಹಬೂಬ್ ಪಾಷ, ರೆಹಮತ್ ಎಂಬುವರು ಕೈಯಲ್ಲಿ ವಿಷದ ಬಾಟಲಿಗಳನ್ನು ಹಿಡಿದು ನ್ಯಾಯಕ್ಕಾಗಿ ಪರಿತಪಿಸಿದರು.