ರೈತ, ಕಾರ್ಮಿಕ ವಿರೋಧಿಸಿ ಧರಣಿ

ಕೋಲಾರ,ಸೆ.೧೭- ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಕಾನೂನು ಮಾಡದಂತೆ ಒತ್ತಾಯಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ವತಿಯಿಂದ ತಾಲೂಕು ಪಂಚಾಯತಿ ಮುಂಭಾಗ ಧರಣಿ ನಡೆಸಿ ಶಾಸಕ ಕೆ.ಶ್ರೀನಿವಾಸಗೌಡರಿಗೆ ಅವರ ಆಪ್ತ ಸಹಾಯಕರ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದು, ಇದೇ ತಿಂಗಳು ೨೧ ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸನ ಸಭೆಯ ಅಂಗೀಕಾರ ಪಡೆಯುವುದಕ್ಕಾಗಿ ಅಜೆಂಡಾ ಪಟ್ಟಿಯಲ್ಲಿ ಇಟ್ಟಿದೆ. ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಸುಗ್ರೀವಾಜ್ಞೆ ೨೦೨೦, ಎ.ಪಿ.ಎಂ.ಸಿ ಕಾಯದೆ ತಿದ್ದುಪಡಿ ಸುಗ್ರೀವಾಜ್ಞೆ ೨೦೨೦, ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ೨೦೨೦ ಸೇರಿದಂತೆ ಮೂರು ಸೂಗ್ರೀವಾಜ್ಞೆಗಳು ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನ ಸಮೂಹಗಳ ಮೇಲೆ ಅತ್ಯಂತ ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡಲಿವೆ ಎಂದು ಆರೋಪಿಸಿದರು.
ಈ ಸುಗ್ರೀವಾಜ್ಞೆಗಳು ಆರ್ಥಿಕ ಅಸಮಾನತೆಯನ್ನು ತೀವ್ರಗೊಳಿಸುವುದಲ್ಲದೆ ದಲಿತ, ಅಲ್ಪಸಂಖ್ಯಾತ ಮಹಿಳೆ ಹೀಗೆ ವಿವಿಧ ಸಾಮಾಜಿಕ ಜನ ಸಮೂಹಗಳನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡುವಂತಹ ಪರಿಣಾಮಗಳನ್ನು ಉಂಟು ಮಾಡುತ್ತದೆ. ಈಗಾಗಲೇ ಕರೋನಾ ಸಾಂಕ್ರಾಮಿಕ ರೋಗದ ದಾಳಿಗೆ ನಲುಗಿ ಹೋಗಿರುವ ಜನ ಸಾಮಾನ್ಯರು ತಮ್ಮ ಪ್ರಜಾಸತ್ತಾತ್ಮಕ ವಿರೋಧವನ್ನು ದಾಖಲಿಸಲಾಗದ ಬಿಕ್ಕಟ್ಟಿನ ಸಮಯದಲ್ಲಿ ಇಂತಹ ಸುಗ್ರೀವಾಜ್ಞೆಗಳನ್ನು ತರುವುದು ಅಪ್ರಜಾಸತ್ತಾತ್ಮಕವಾಗುತ್ತದೆ. ಎಂದು ದೂರಿದರು.
ಕೆ.ಪಿ.ಆರ್.ಎಸ್. ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮಾತನಾಡಿ, ಕೇಂದ್ರ ಸರ್ಕಾರವು ಇಡೀ ಕೃಷೀ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳ ಸುಪರ್ಧಿಗೆ ಒಪ್ಪಿಸುವ ಗುರಿ ಉದ್ದೇಶವುಳ್ಳ ರೈತ ವಿರೋಧಿ, ಕಾರ್ಪೋರೇಟ್ ಪರ ಮೂರು ಸುಗ್ರೀವಾಜ್ಞೆಗಳಾದ ಕೃಷಿ ಉತ್ಫನ್ನ ಮಾರಾಟ ಮತ್ತು ವಾಣಿಜ್ಯ(ಉತ್ತೇಜನ ಹಾಗೂ ಬೆಂಬಲ) ಸುಗ್ರೀವಾಜ್ಞೆ ೨೦೨೦, ಬೆಲೆ, ಭರವಸೆ ಹಾಗೂ ಕೃಷಿ ಸೇವೆಗಳ ಕುರಿತ ರೈತ(ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದ ಸುಗ್ರೀವಾಜ್ಞೆ ೨೦೨೦, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ೨೦೨೦ ಗಳನ್ನು ಹೊರಡಿಸಿ ವಿದ್ಯುತ್ ಕಾಯ್ದೆ ೨೦೨೦ ಅನ್ನು ರೂಪಿಸಿದೆ.
ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭೆಯ ಅಂಗೀಕಾರಕ್ಕೆ ಚರ್ಚೆಗೆ ಬರುತ್ತಿರುವ ಮೂರು ಸುಗ್ರೀವಾಜ್ಞೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ಶಾಸನ ಆಗದಂತೆ ನೋಡಿಕೊಳ್ಳಬೇಕೆಂದು ಸಮಿತಿಯು ಒತ್ತಾಯಿಸಿದೆ.
ನಿಯೋಗದಲ್ಲಿ ಪದಾಧಿಕಾರಿಗಳಾದ ಟಿ.ಎನ್. ರಾಮೇಗೌಡ ವೀರಾಪುರ ಮಂಜುನಾಥ್,ಎನ್.ಎನ್.ಶ್ರೀರಾಮ್ ಮುಖಂಡರಾದ ಕುರ್ಕಿ ದೇವರಾಜ್, ಗಂಗಮ್ಮ ಎನ್.ಯಲ್ಲಪ್ಪ, ಅಲಹಳ್ಳಿ ವೆಂಕಟೇಶಪ್ಪ, ಹೊಲ್ಲಂಬಳ್ಳಿ ವೆಂಕಟೇಶಪ್ಪ,, ಕೆ.ಜಿ.ಎಪ್. ತಾಲೂಕು ಅಧ್ಯಕ್ಷ ವಿ.ಆರ್. ಲಕ್ಷ್ಮಿನಾರಾಯಣ, ಕೋಲಾರ ಆನಂದ್ ಕುಮಾರ್, ವಾನರಾಶಿ ಮುನಿವೆಂಕಟಪ್ಪ, ಪಟ್ನ ನಾಗರಾಜ, ಮಹಮದ್ ಶಾಹಿದ್ ಅಲಿ, ಕೋಲಾರ ರಮೇಶ್, ಬಡಮಾಕನಹಳ್ಳಿ ಶಿವಣ್ಣ, ರಾಮಣ್ಣ, ಅಬ್ಬಣಿ ನಾರಾಯಣಸ್ವಾಮಿ, ನವೀನ್ ಉಪಸ್ಥಿತರಿದ್ದರು.