ರೈತ ಎಂದರೆ ನಮ್ಮ ದೇಶದ ಸಂಸ್ಕøತಿ: ಚಿತ್ರನಟ ಕ್ರಾಂತಿ

ಕಲಬುರಗಿ,ಜೂ.08: ರೈತ ಎಂದರೆ ಸಾಮಾನ್ಯ ವ್ಯಕ್ತಿಯಲ್ಲ ಜಗತ್ತಿಗೆ ಅನ್ನ ನೀಡುವ ಮಹಾನ್ ಶಕ್ತಿ. ನಮ್ಮ ದೇಶದ ಸಂಸ್ಕøತಿ ರೈತನ ಬದುಕಿನಲ್ಲಿ ಅಡಗಿದೆ ಎಂದು ಶ್ರೀಮಂತ್ ಕನ್ನಡ ಚಲನಚಿತ್ರ ನಟ ಕ್ರಾಂತಿ ಅವರು ಅಭಿಮತ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಆಯೋಜಿಸಿದ್ದ ಮುಖಾಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ರೈತ ಎಂಬ ಪರಿಕಲ್ಪನೆಯೊಂದಿಗೆ ಶ್ರೀಮಂತ ಎಂಬ ಕನ್ನಡ ಚಲನಚಿತ್ರವನ್ನು ಸಿದ್ಧಪಡಿಸಲಾಗಿದೆ. ರೈತರ ಬದುಕು, ಬವಣೆಯನ್ನು ನಿರೂಪಿಸುವ ಚಿತ್ರ ಇದಾಗಿದೆ ಎಂದರು.
ಸಿನೆಮಾ ಎಂದರೆ ಕೇವಲ ಮನೋರಂಜನೆಗೆ ಸೀಮಿತವಲ್ಲ. ನಾಡಿನ, ದೇಶದ, ಜಗತ್ತಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಬಹುದೊಡ್ಡ ಮಾಧ್ಯಮ ಚಲನಚಿತ್ರ ಕ್ಷೇತ್ರವಾಗಿದೆ. ರೈತರ ಕಷ್ಟಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಶ್ರೀಮಂತ ಚಿತ್ರ ಕೇವಲ ರೈತರಿಗಾಗಿ ಮೀಸಲಿಡಲಾಗಿದೆ. ಪ್ರತಿಯೊಬ್ಬರು ಈ ಚಿತ್ರ ವೀಕ್ಷಿಸುವ ಮೂಲಕ ರೈತರಿಗೆ ಗೌರವ ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಮಣ್ಣಿನ ಮಗನಾಗಿ ಚಲನ ಚಿತ್ರದಲ್ಲಿ ನಟನಾಗಿ ನಟಿಸುತ್ತಿರುವುದು ಹೆಮ್ಮೆಯ ವಿಷಯ. ಈ ಭಾಗದಲ್ಲಿ ಕಲಾವಿದರಿಗೆ ಕೊರತೆಯಿಲ್ಲ. ಆದರೆ ವೇದಿಕೆ ಸಿಗುತ್ತಿಲ್ಲ ಎಂಬ ಕೊರಗು ಇದೆ. ಚಲನ ಚಿತ್ರದಲ್ಲಿ ಅವಕಾಶ ಪಡೆಯಬೇಕಾದರೆ ತಾಳ್ಮೆ ಇರಬೇಕು. ಸಹನೆ ಕಳೆದುಕೊಂಡರೆ ಅವಕಾಶದಿಂದ ವಂಚಿತರಾಗಬೇಕಾಗುತ್ತದೆ. 15 ವರ್ಷಗಳ ನಿರಂತರ ತಪ್ಪಸ್ಸಿನ ಫಲದಿಂದ ನಟನಾಗುವ ಅವಕಾಶ ನನಗೆ ಸಿಕ್ಕಿದೆ. ಹೆಚ್ಚಿನ ಜನರು ಶ್ರೀಮಂತ್ ಸಿನೆಮಾ ನೋಡುವ ಮೂಲಕ ಜಿಲ್ಲೆಯ ಕೀರ್ತಿ ಉತ್ತುಂಗಕ್ಕೇರಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಮಾತನಾಡಿ, ಸ್ಥಳೀಯರೇ ಆಗಿರುವ ಕ್ರಾಂತಿ ಅವರು ಕನ್ನಡ ಚಿತ್ರ ರಂಗದಲ್ಲಿ ಸಾಧನೆ ಮಾಡಿದ್ದಾರೆ. ಚಿತ್ರ ನಟನಾಗಿ ನಟಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಭಾಗದವರಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುವುದೇ ವಿರಳ ಎಂಬ ಸಂದರ್ಭದಲ್ಲಿ ಕ್ರಾಂತಿ ಅವರು ಸಾಧನೆ ಮಾಡಿದ್ದಾರೆ. ಅವರ ಕೀರ್ತಿ ಇನ್ನೂ ಬೆಳೆಯಲಿ ಎಂದು ಶುಭ ಕೋರಿದರು.
ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ, ಜೇವರ್ಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ. ಬಿರಾದಾರ್, ದಕ್ಷಿಣ ವಲಯ ಅಧ್ಯಕ್ಷ ಶಾಮಸುಂದರ್ ಕುಲಕರ್ಣಿ, ಧರ್ಮಣ್ಣಾ ಹೆಚ್. ಧನ್ನಿ, ವಿನೋದಕುಮಾರ್ ಜೇನವೇರಿ, ಶಿಲ್ಪಾ ಜೋಶಿ, ಮಾಲಾ ದಣ್ಣೂರ್, ಸುನೀತಾ ದೊಡ್ಮನಿ, ರಾಜೇಂದ್ರ ಮಾಡಬೂಳ್, ಬಸ್ವಂತರಾಯ್ ಕೋಳಕೂರ್, ಮಲ್ಲಿನಾಥ್ ಸಂಗಶೆಟ್ಟಿ, ಶಿವಕುಮಾರ್ ಸಿ.ಹೆಚ್., ಸಂಗಪ್ಪ ಭೀಮಳ್ಳಿ, ಹೆಚ್.ಎಸ್. ಬರಗಾಲಿ, ನಾಗರಡ್ಡಿ ಎಸ್.ಕೆ., ಸುರೇಶ್ ಕರನಾಳಕರ್, ಸೈಯದ್ ಖಲೀಲ್ ಬಾಬಾ, ಮಹ್ಮದ್ ಸಾಧೀಕ್ ಶಾ, ಜಗದೀಶ್ ದೇಶಪಾಂಡೆ, ಪ್ರಸಾದ್ ಜೋಶಿ, ಶಿವಶಂಕರ್ ಬಿ., ಗಂಗಾಧರ್ ಸ್ವಾಮಿ, ಮಲ್ಲಿಕಾರ್ಜುನ್ ಇಬ್ರಾಹಿಂಪೂರ್, ವಿಶ್ವನಾಥ್ ತೊಟ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.