ರೈತ ಉತ್ಪಾದಕರ ಸಂಸ್ಥೆಗಳ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ, ಡಿಸಿಗೆ ಮನವಿ

ವಿಜಯಪುರ,ಮೇ.22: ಕರ್ನಾಟಕ ರಾಜ್ಯ ಸರ್ಕಾರದಿಂದ ರಚನೆ ಆಗಿರುವ ರೈತ ಉತ್ಪಾದಕರ ಸಂಸ್ಥೆಗಳ ಬಾಕಿ ಹಣ ಬಿಡುಗಡೆಗೊಳಿಸಲು ಆಗ್ರಹಿಸಿ ಬಿಜೆಪಿ ನಗರ ಮಂಡಲ ರೈತ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತ ಮೋರ್ಚಾ ಅಧ್ಯಕ್ಷ ರಾಚು ಬಿರಾದಾರ ಮಾತನಾಡಿ, ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿರುವ ಕಾಂಗ್ರೆಸ್ ಸರ್ಕಾರದ ಸಾಧನೆ ಮಾತ್ರ ಶೂನ್ಯ. ಗ್ಯಾರಂಟಿ ಗುಂಗಿನಲ್ಲಿರುವ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಅಭಿವೃದ್ಧಿ ಸಂಪೂರ್ಣ ಮರೆತಿದ್ದಾರೆ. ತಮ್ಮದೆ ಪಕ್ಷದ ಶಾಸಕರು ಕೂಡ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಅದೇ ಅವರ ಕಳಪೆ ಆಡಳಿತ ತೋರಿಸುತ್ತದೆ ಎಂದರು.
ಅಭಿವೃದ್ಧಿ ಕಾಮಗಾರಿಗೆ ಹಣ ನೀಡದ ಸರ್ಕಾರ, ರೈತರ ಏಳಿಗಾಗಿ ರಚನೆಗೊಂಡಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ನೀಡಬೇಕಾದ ಹಣ ಬಾಕಿ ಉಳಿಸಿಕೊಳ್ಳುವ ಮೂಲಕ ಅನ್ನದಾತರಿಗೂ ಅನ್ಯಾಯ ಮಾಡಿದೆ. ಹಣ ನೀಡದೆ ಇರುವುದರಿಂದ 10 ಲಕ್ಷ ರೈತರಿಗೆ ಹಾಗೂ 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಬಾಕಿ ಹಣ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ ಪಡಗಾನೂರ, ಕಾರ್ಯದರ್ಶಿ ಬಸನಗೌಡ ಬಿರಾದಾರ, ಸದಸ್ಯರಾದ ಕುಮಾರ ನಿಡೋಣಿ, ಜಗದೀಶ ಪಚ್ಯಾಪುರ, ರಮೇಶ ಚಿಕ್ಕಲಕಿ, ಸಿದ್ದು ಬಿರಾದಾರ, ಹನಮಂತ ಹಡಪದ, ರೋಹಿಣಿ ಚಾಮೇಕರ, ರೇಣುಕಾ ಪರಸಪ್ಪಗೋಳ ಮತ್ತಿತರರು ಇದ್ದರು.