ರೈತಸಂಪರ್ಕ ಕೇಂದ್ರಗಳು ಜನಸ್ನೇಹಿಯಾಗಿರಲಿ – ಶಾಸಕ ಡಾ ಶ್ರೀನಿವಾಸ.

ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 9 : – ತಾಲೂಕಿನ ಕಾನಹೊಸಹಳ್ಳಿಯಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ರೈತ ಸಂಪರ್ಕ ಕೇಂದ್ರವು ಜನ ಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಕೇಂದ್ರವಾಗಲಿ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಅವರು ತಾಲೂಕಿನ ಕಾನಹೊಸಹಳ್ಳಿಯ ಹೊರವಲಯದಲ್ಲಿ ನಿರ್ಮಿಸಲಾಗಿರುವ  ರೈತ ಸಂಪರ್ಕ ಕೇಂದ್ರದ ನೂತನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ರೈತ ಸಮೂಹಕ್ಕೆ ಸರಕಾರದಿಂದ ಸಿಗುವಂಥ ಸೌಲಭ್ಯವನ್ನು ಸರಿಯಾದ ರೀತಿಯಲ್ಲಿ ತಲುಪಿಸುವ ಕಾರ್ಯವಾಗಬೇಕು. ಉತ್ತಮ ತಳಿಯ ಬಿತ್ತನೆ ಬೀಜ, ಗೊಬ್ಬರ ಸೇರಿ ಇತರೆ ಪರಿಕರಗಳನ್ನು ರಿಯಾಯಿತಿ ದರದಲ್ಲಿ ವಿತರಣೆಯಾಗುವುದು ಲೋಪವಾಗಬಾರದು ಎಂದು ತಿಳಿಸಿದರು.
ಗ್ರಾಪಂ ನೂತನ ಅಧ್ಯಕ್ಷ ಎ.ಸಿ.ಚೇತನ್ ಮಾತನಾಡಿ, ಬಿತ್ತನೆ ಬೀಜ ಸೇರಿ ಇತರೆ ಕೃಷಿ ಪರಿಕರಗಳನ್ನು ರೈತರಿಗೆ ಸಕಾಲದಲ್ಲಿ ತಲುಪಿಸಲು ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಟಿ.ಸುನೀಲ್ ಕುಮಾರ್ ಪ್ರಾಸ್ತಾವಿಕ ನುಡಿದರು. ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ ಮಂಜುನಾಥ, ಮುಖಂಡ ಎ.ಚನ್ನಬಸಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆ ಉಪ ಕೃಷಿ ನಿರ್ದೇಶಕಿ ಮಂಜುಳಾ ಬಸವರೆಡ್ಡಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಜಿ.ಸಿದ್ದನಗೌಡ, ಕೃಷಿ ಇಲಾಖೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶ್ರವಣ ಕುಮಾರ್, ಸಹಾಯಕ ಕೃಷಿ ಅಧಿಕಾರಿ ಗುರುಬಸವರಾಜ ಚಿಲಗೋಡು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರಗೌಡ, ತಾಪಂ ಮಾಜಿ ಸದಸ್ಯ ಗುರುಸಿದ್ದನಗೌಡ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಣವಿಕಲ್ಲು ಎರಿಸ್ವಾಮಿ, ಮುಖಂಡರಾದ ಜಿ.ಓಬಣ್ಣ, ದುಗ್ಗಪ್ಪ, ಎಂ.ಒ.ಮಂಜುನಾಥ, ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚೈತ್ರಾ, ರಾಮಕೃಷ್ಣ ಬಂಡ್ರಿ, ರಾಕೇಶ್ ಸೇರಿ ಇತರರಿದ್ದರು.
ಯೋಜನೆ ನನೆಗುದಿಗೆ ಬಿದ್ದಿಲ್ಲ
ಕೂಡ್ಲಿಗಿ ಕ್ಷೇತ್ರದಲ್ಲಿ ಕಳೆದ ಸಾಲಿನ ಶಾಸಕರ ಅವಧಿಯಲ್ಲಿ ಜಾರಿಗೊಂಡಿರುವ ತಾಲೂಕಿನ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ನನೆಗುದಿಗೆ ಬಿದ್ದಿಲ್ಲ. ಈ ಬಗ್ಗೆ ನಾನು ಶಾಸಕನಾದ ನಂತರ ನಿರಂತರವಾಗಿ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸುತ್ತಿದ್ದೇನೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು. ಹುಲಿಕೆರೆ ಗ್ರಾಮದ ನಿವೃತ್ತ ಶಿಕ್ಷಕ ಸೋಮಶೇಖರ್ ಅವರು ಕೃಷಿ ಇಲಾಖೆ ಕಟ್ಟಡ ಉದ್ಘಾಟನೆ ವೇದಿಕೆಯಲ್ಲಿದ್ದ ಶಾಸಕರಿಗೆ ಕೆರೆಗೆ ನೀರು ತುಂಬಿಸುವ ಯೋಜನೆ ಶೀಘ್ರವೇ ಸಾಕಾರಗೊಳ್ಳಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ಸಂದರ್ಭ ಈ ವಿಷಯವನ್ನು ತಿಳಿಸಿದರು. ಕೆರೆಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಶೇ.90ರಷ್ಟು ಮುಗಿದಿದ್ದು, ಹೂವಿನಹಡಗಲಿ ಮತ್ತು ಗುಡೇಕೋಟೆ ಬಳಿಯ ಅರಣ್ಯ ಪ್ರದೇಶದಲ್ಲಿ ಪೈಪ್‌ಲೈನ್ ಕಾಮಗಾರಿ ಬಾಕಿಯಿದೆ. ಅರಣ್ಯ ಇಲಾಖೆಯಿಂದ ಅನುಮತಿ ದೊರೆತ ತಕ್ಷಣವೇ ಯೋಜನೆ ಪೂರ್ಣಗೊಂಡು ಶೀಘ್ರವೇ ನೀರು ತುಂಬಿಸುವ ಕಾರ್ಯ ನಡೆಯಲಿದ್ದು, ತಾಲೂಕಿನ ರೈತರಿಗೆ ವರದಾನವಾಗಲಿದೆ ಎಂದು ತಿಳಿಸಿದರು.