
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.23: ತಾಲೂಕಿನ ಮಾಕವಳ್ಳಿ ಬಳಿಯಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆಯ ಬಗ್ಗೆ ನಿಗಾ ವಹಿಸಲು ರಚಿಸಿರುವ ಸ್ಥಳೀಯ ಸಮಿತಿ ಸಭೆಯನ್ನು ಪದೇ ಪದೇ ಮುಂದೂಡುತ್ತಿರುವ ಸಮಿತಿಯ ಅಧ್ಯಕ್ಷರಾದ ನಿಲುವನ್ನು ತಾಲೂಕು ರೈತಸಂಘ ಖಂಡಿಸಿದ್ದು ಯಾವುದೇ ಕಾರಣಕ್ಕೂ ನಿಗಧಿತ ಸಭೆಯನ್ನು ಮತ್ತೆ ಮುಂದೂಡದಂತೆ ಒತ್ತಾಯಿಸಿದೆ.
ನಿಗಾ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ಪಾಂಡವಪುರ ಉಪ ವಿಭಾಗಾಧಿಕಾರಿಗಳ ವರ್ತನೆಯನ್ನು ಖಂಡಿಸಿದರಲ್ಲದೆ ಸಭೆಯನ್ನು ಮತ್ತೆ ಮುಂದೂಡಿದರೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಎಂ.ವಿ.ರಾಜೇಗೌಡ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಪರಿಸರ ಮಾಲಿನ್ಯದ ವಿರುದ್ದ ತಾಲೂಕು ರೈತಸಂಘ ನಡೆಸಿದ ತೀವ್ರ ಹೋರಾಟದ ಪರಿಣಾಮ 25-01-2014 ರಲ್ಲಿ ರಾಜ್ಯ ಸರ್ಕಾರ ಪಾಂಡವಪುರ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಳೀಯ ನಿಗಾ ಸಮಿತಿಯನ್ನು ರಚನೆ ಮಾಡಿದೆ. ಪ್ರತಿ ಎರಡು ? ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಕಾರ್ಖಾನೆಯ ಪರಿಸರ ಮಾಲಿನ್ಯ ನಿಯಂತ್ರಣಾ ಕ್ರಮಗಳ ಬಗ್ಗೆ ನಿಗಾ ವಹಿಸಿ ಸಾರ್ವಜನಿಕರ ಆರೋಗ್ಯ ಮತ್ತು ಕಾರ್ಖಾನೆಯ ಸುತ್ತಮುತ್ತಲ ಕೃಷಿ ವಲಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗದಂತೆ ಅಗತ್ಯ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡುವುದು ಈ ಸ್ಥಳೀಯ ಸಮಿತಿಯ ಕರ್ತವ್ಯ. ಆದರೆ 2022ರ ಮಾರ್ಚ್ ತಿಂಗಳ ಅನಂತರ ಇದುವರೆಗೂ ಸಮಿತಿಯ ಅಧ್ಯಕ್ಷರಾದ ಪಾಂಡವಪುರ ಉಪ ವಿಭಾಗಾಧಿಕಾರಿಗಳು ಇದುವರೆಗೂ ಒಂದೇ ಒಂದು ನಿಗಾ ಸಮಿತಿಯ ಸಭೆ ಕರೆದಿಲ್ಲ ಪದೇ ಪದೇ ಸಭೆಯನ್ನು ಮುಂದೂಡುತ್ತಿರುವ ಅಧಿಕಾರಿಗಳ ಕಾರ್ಯತಂತ್ರದ ಬಗ್ಗೆ ನಮಗೆ ಅನುಮಾನ ಮೂಡುತ್ತಿದೆ.
ರೈತ ಮಿತ್ರ ಎಂದು ಹೇಳುತ್ತಲೇ ಕಾರ್ಖಾನೆ ತನ್ನ ಪರಿಸರದ ಸುತ್ತಮುತ್ತಲ ರೈತರ ಬದುಕನ್ನು ಕಸಿದುಕೊಳ್ಳುತ್ತಿದೆ. ಕಾರ್ಖಾನೆಯ ದೆಸೆಯಿಂದಾಗಿ ಕಾರ್ಖಾನೆ ಸಮೀಪದ ಹೇಮಾವತಿ ನೀರು ಕಲುಷಿತಗೊಳ್ಳುತ್ತಿದೆ. ಕಾರ್ಖಾನೆಯ ಗಾಳಿ ಮತ್ತು ಹಾರು ಬೂದಿಯ ಸಮಸ್ಯೆಯಿಂದಾಗಿ ಸುತ್ತಮುತ್ತಲ ಜನ ಸ್ಲೋ ಪಾಯಿಸನ್ (ನಿಧಾನ ಗತಿಯ ವಿಷ ಸೇವನೆ) ಗೆ ಒಳಗಾಗಿದ್ದಾರೆ. ಸುತ್ತಮುತ್ತಲ ಜನರಲ್ಲಿ ಧೀರ್ಘ ಪರಿಣಾಮದ ಕಾಯಿಲೆಗಳು ಕಾಣಿಸಿಕೊಂಡಿವೆ. ರೈತರು ಬೆಳೆದ ಬೆಳೆಗಳ ಮೇಲೆಲ್ಲಾ ಕಾರ್ಖಾನೆಯ ಹಾರು ಬೂದಿ ಕುಳಿತು ಪರಿಸರ ಮಾಲಿನ್ಯದ ಜೊತೆಗೆ ಇಳುವರಿ ಸಮಸ್ಯೆಯೂ ರೈತರನ್ನು ಕಾಡುತ್ತಿದೆ. ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಪಾಂಡವಪುರ ಉಪ ವಿಭಾಗಧಿಕಾರಿಗಳು ಜುಲೈ 28 ರಂದು ಕಾರ್ಖಾನೆಯ ಆವರಣದಲ್ಲಿ ಕರೆದಿರುವ ಪರಿಸರ ಮಾಲಿನ್ಯ ನಿಗಾ ಸಮಿತಿಯ ಸಭೆಯನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು. ಮತ್ತೆ ಮುಂದೂಡಿದರೆ ರೈತಸಂಘದ ಪ್ರತಿನಿಧಿಯಾದ ಎಂ.ವಿ.ರಾಜೇಗೌಡ ಸಭೆಯನ್ನು ಶಾಶ್ವತವಾಗಿ ಬಹಿಷ್ಕರಿಸುವುರಲ್ಲದೆ ರಾಜೇಗೌಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ರೈತ ಮುಖಂಡರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಎಲ್.ಬಿ.ಜಗದೀಶ್, ಕಾಗೇಪುರ ಮಹೇಶ್ ಇದ್ದರು.