ರೈತರ 3 ಕರಾಳ ಕೃಷಿ ಕಾಯ್ದೆಗಳ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ


ಸಂಜೆವಾಣಿ ವಾರ್ತೆ
ದಾವಣಗೆರೆ. ಫೆ.೧೫; ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿದ್ದ ಕಾರ್ಪೋರೇಟ್ ಪರ ಹಾಗೂ ರೈತ ವಿರೋಧಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಪದಾಧಿಕಾರಿಗಳು ತಾಲ್ಲೂಕಿನ ಆನಗೋಡು ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯ ಮುಖಂಡರಾದ ಹೆಚ್.ಜಿ ಉಮೇಶ್ ಮಾತನಾಡಿ ರೈತರ ಉತ್ಪನ್ನಗಳಿಗೆ ಎಂ.ಎಸ್. ಸ್ವಾಮಿನಾಥನ್ ಶಿಫಾರಸ್ಸಿನ ಸೂತ್ರ C2+50% ಪ್ರಕಾರ ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು ಹಾಗೂರೈತರಿಗೆ ನೀಡುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ವಿದ್ಯುಚ್ಚಕ್ತಿ ಮೇಲಿನ ಸಬ್ಸಿಡಿ ಮೊತ್ತ ಹೆಚ್ಚಳವಾಗಬೇಕು. ರೈತರ ಆತ್ಮಹತ್ಯೆ ತಡೆಯಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ರಾಷ್ಟ್ರೀಯ ಕನಿಷ್ಠ ವೇತನ ಮಾಸಿಕ 26,000‌ ರೂಗಳಿಗೆ ನಿಗದಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ, ಖಾಯಂ ಸ್ವರೂಪದ ಕೆಲಸದಲ್ಲಿ ತೊಡಗುವ ಕಾರ್ಮಿಕರ ಖಾಯಂಗೆ ಶಾಸನ ರೂಪಿಸಬೇಕು. 4 ಕಾರ್ಮಿಕ ಸಂಹಿತೆಗಳನ್ನು,ಎಫ್ ಟಿಐ ಪದ್ಧತಿಯನ್ನು ಹಾಗೂ ಕೆಲಸದ ಅವಧಿಯ ಹೆಚ್ಚಳವನ್ನು ರದ್ದುಪಡಿಸಬೇಕು.ಅರಣ್ಯ ಹಕ್ಕು ಕಾಯ್ದೆ 2006 ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಕಾರ್ಪೋರೇಟ್ ಸ್ನೇಹಿ ಅರಣ್ಯ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2023 ಹಾಗೂ ಜೀವ ವೈವಿಧ್ಯ ಕಾಯ್ದೆಯನ್ನು ರದ್ದುಪಡಿಸಬೇಕು. ಪ್ರತಿಯೊಬ್ಬರಿಗೂ ವಸತಿ ಹಕ್ಕು ಖಾತ್ರಿಪಡಿಸಬೇಕು. ಬಲವಂತದ ಭೂಸ್ವಾಧೀನ ನಿಲ್ಲಿಸಿ ಪರಿಹಾರ ಕ್ರಮ ವೈಜ್ಞಾನಿಕ. ರೈತ ಸ್ನೇಹಿಯಾಗಿರಬೇಕು. ಬಗ‌ರ್ ಹುಕ್ಕುಂ ಸಾಗುವಳಿದಾರರು ಸೇರಿದಂತೆ ಎಲ್ಲಾ ಉಳುಮ ರೈತರಿಗೆ ಭೂಮಿ ಹಕ್ಕು ಖಾತರಿಪಡಿಸಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹೊನ್ನೂರು ಮುನಿಯಪ್ಪ,ಮಧು ತೊಗಲೇರಿ,ಭೀಮಪ್ಪ,ಐರಣಿ ಚಂದ್ರು,ತಿಪ್ಪೇಸ್ವಾಮಿ ಮತ್ತಿತರರಿದ್ದರು.