ರೈತರ ಹೋರಾಟ ಹತ್ತಿಕ್ಕಲು ಕೇಂದ್ರದಿಂದ ಹೇಯ ಕೃತ್ಯ

ಸಂಜೆವಾಣಿ ನ್ಯೂಸ್
ಮೈಸೂರು.ಫೆ.15:- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನ್ಯಾಯ ಕೇಳಿ ದೆಹಲಿಗೆ ಬಂದ ರೈತರ ಮೇಲೆ ದಬ್ಬಾಳಿಕೆ ನಡೆಸಿ ಪ್ರತಿಭಟನೆ ಹಕ್ಕನ್ನು ದಮನ ಮಾಡಲು ಹೊರಟಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಖಂಡಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿ, ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹಿಸಿ ನ್ಯಾಯ ಕೇಳಲು ಹೊರಟ್ಟಿರುವ ರೈತರನ್ನು ದೆಹಲಿಗೆ ಗಡಿ ಭಾಗಗಳಲ್ಲಿ ತಡೆದು ಅಶ್ರವಾಯು ಬಳಕೆ, ಮುಳ್ಳಿನ ಬೇಲಿ ಹಾಕಿ ಕಿರುಕುಳ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 2020ರಲ್ಲಿ 13 ತಿಂಗಳು ನಿರಂತರವಾಗಿ ನಡೆದ ರೈತದ ಚಳವಳಿಯನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ಮಾಡಬಾರದ ಎಲ್ಲ ಕೆಲಸಗಳನ್ನು ಮಾಡಿ ಕೊನೆಗೆ ಶರಣಾಗಿ ರೈತರ ಬೇಡಿಕೆ ಈಡೇರಿಸುವ ವಾಗ್ದಾನ ನೀಡಿತ್ತು. ಈಗ ವಚನ ಭ್ರಷ್ಟರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಲು ಬಂದ ಅನ್ನದಾತ ರೈತರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ.
ಸಹಿಸಲಾಗದ ಹೇಯ ಕೃತ್ಯಗಳನ್ನು ನಡೆಸಲು ಮುಂದಾಗಿದೆ. ರೈತರನ್ನು ಎದುರು ಹಾಕಿಕೊಂಡು ಯಾವ ಪಕ್ಷ ಅಥವಾ ಸರ್ಕಾರಗಳ ಉಳಿದುಕೊಂಡ ಉದಾಹರಣೆಗಳು ಕಡಿಮೆ. ಮುಂದಿನ ಚುನಾವಣೆಯಲ್ಲಿ ರೈತ ಸಮುದಾಯ ತಕ್ಕಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಫೆ.16ರಂದು ಗ್ರಾಮೀಣ ಬಂದ್‍ಗೆ ಕರೆ ನೀಡಿದ್ದು, ಕೇಂದ್ರ ಸರ್ಕಾರದ ರೈತ ದಮನಿತ ಕೃತ್ಯವನ್ನು ಖಂಡಿಸಬೇಕು ಎಂದು ಮನವಿ ಮಾಡಿದರು.
ಕೊರೂರು ವೈಶ್ಯ ಬ್ಯಾಂಕ್ ಮಧ್ಯವರ್ತಿಗಳ ಮೂಲಕ ರೈತರಿಂದ ದಾಖಲೆ ಪಡೆದು 4 ಲಕ್ಷ ರೂ.ಸಾಲ ಮಂಜೂರು ಮಾಡಿ, 2 ಲಕ್ಷ ರೂ.ಗಳನ್ನು ರೈತರಿಗೆ ಪಾವತಿಸಿ, ಇನ್ನುಳಿದ ಬಾಕಿ ಹಣವನ್ನು ಬ್ಯಾಂಕ್ ಅಕಾರಿಗಳು ಮತ್ತು ಮಧ್ಯವರ್ತಿಗಳು ಲಪಟಾಯಿಸಿ ರೈತರಿಗೆ ವಂಚಿಸಿರುವುದಲ್ಲದೆ, ಪೂರ್ಣ ಸಾಲ ಬಾಕಿಗಾಗಿ ದಾವೆ ಹೂಡಿ, ರೈತರಿಗೆ ಕಿರುಕಿಳು ನೀಡುತ್ತಿದೆ. ಇದನ್ನು ಖಂಡಿಸಿ ಸಂಘವು ಮರಿಮಲ್ಲಪ್ಪ ಕಾಲೇಜಿನ ಬಳಿಯಿರುವ ಬ್ಯಾಂಕಿನ ಎದುರು ?.19ರಂದು ಪ್ರತಿಭಟನೆ ನಡೆಸಲಿದೆ. ಈ ವೇಳೆ ಜಿಲ್ಲಾಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಸ್ಥಳಕ್ಕೆ ಆಗಮಿಸಿ ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.
ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ತಾಲ್ಲೂಕು ಅಧ್ಯಕ್ಷ ಮಂಡಕಳ್ಳಿ ಮಹೇಶ್, ಗೌರವಾಧ್ಯಕ್ಷ ನಾಗನಹಳ್ಳಿ ವಿಜಯೇಂದ್ರ, ರೈತ ಮುಖಂಡ ಪಿ.ಮರಂಕಯ್ಯ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.