ರೈತರ ಹೋರಾಟ ಸರ್ಕಾರ ಧಮನ

ಬೆಂಗಳೂರು, ಮೇ ೨೭- ಕೇಂದ್ರ ಸರ್ಕಾರ ಈ ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟ, ಪರತಿಭಟನೆಗಳಲ್ಲಿ ೩೪೦ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ಕೇಂದ್ರಸರ್ಕಾರವೇ ನೇರ ಹೊಣೆ ಎಂದು ದೂರಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರ್ಕಾರ ರೈತರ ಹೋರಾಟವನ್ನು ನಿರ್ಲಕ್ಷಿಸಿ ಧಮನ ಮಾಡಲು ಪ್ರಯತ್ನ ನಡೆಸಿ ಅಮಾನುಷವಾಗಿ ವರ್ತಿಸಿದೆ ಎಂದು ಟೀಕಿಸಿದರು.
ಕೇಂದ್ರಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ೬ ತಿಂಗಳಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ರೈತರ ಬೇಡಿಕೆಗಳನ್ನು ಈಡೇರಿಸಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ದೇಶದ ಆರ್ಥಿಕ ಭದ್ರತೆಯನ್ನು ನಾಶ ಮಾಡುವ ಮತ್ತು ರೈತರ ಕಾರ್ಮಿಕರ ಪಾಲಿಗೆ ಮರಣ ಶಾಸನವಾಗುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ರೈತ ಸಮುದಾಯದ ಹಕ್ಕೋತ್ತಾಯಗಳಿಗೆ ಮೋದಿ ಸರ್ಕಾರ ಕುರುಡಾಗಿ, ಕಿವುಡಾಗಿ ನಡೆದುಕೊಳ್ಳುತ್ತಿದೆ. ಈಗಲಾದರೂ ರೈತ ಕಾಯ್ದೆಗಳನ್ನು ವಾಪಸ್ ಪಡೆಯಿರಿ ಎಂದು ಅವರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಬೇಳೆ-ಕಾಳುಗಳು ಮತ್ತು ಎಣ್ಣೆ ಬೀಜಗಳ ಉತ್ಪಾದನೆ ಸೇ. ೧೬ರಷ್ಟು ಹೆಚ್ಚಾಗಿತ್ತು, ಆದರೂ ರೈತರಿಗೆ ಒಳ್ಳೆ ಬೆಲೆ ಸಿಗಲಿಲ್ಲ. ಮಾರುಕಟ್ಟೆಯಲ್ಲಿ ಬೇಳೆ-ಕಾಳುಗಳ ಬೆಲೆ ಶೇ. ೭೫ರಷ್ಟು, ಅಡುಗೆ ಎಣ್ಣೆಯ ಬೆಲೆ ಶೇ. ೧೨೦ರಷ್ಟು ಬೆಲೆ ಹೆಚ್ಚಾಗಿದೆ ಎಂದರು.
ಬೇಳೆ-ಕಾಳುಗಳು, ಎಣ್ಣೆ ಕಾಳುಗಳ ಪ್ರಮುಖ ವ್ಯಾಪಾರಿ ಅದಾನಿ ಕಂಪನಿ, ೧ ಕೆಜಿ ಬೇಳೆ ಬೆಲೆ ಹೆಚ್ಚಾದರೆ ಈ ಕಂಪನಿಗೆ ಲಾಭ, ಹಾಗಾಗಿ, ಕೇಂದ್ರ ಸರ್ಕಾರದ ನೀತಿ ಮತ್ತು ಕಾಯ್ದೆಗಳಿಂದ ಅಂಬಾನಿ ಮತ್ತು ಅದಾನಿಗಳ ಸಂಪತ್ತು ಹಿಮಾಳಯದಂತೆ ಬೆಳೆಯುತ್ತಿದೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ರೈತರೊಡನೆ ಚರ್ಚಿಸಿ ಹೋರಾಟವನ್ನು ಹಿಂಪಡೆಯುವಂತೆ ಮಾಡಿ ಬೇಡಿಕೆ ಈಡೇರಿಸಬೇಕು. ಹಾಗೆಯೇ ಜನವಿರೋಧಿಯಾದ ಅದಾನಿ ಮತ್ತು ಅಂಬಾನಿ ಅವರ ಪರವಾದ ಕಾರ್ಪರೇಟ್ ಕಾನೂನುಗಳನ್ನು ಹಿಂಪಡೆಯಬೇಕು. ಪರತಿಭಟನೆ ಸಂದರ್ಭದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡಬೇಕು. ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆ, ಗ್ರಾಹಕರಿಗೆ ನ್ಯಾಯಯುತವದ ಬೆಲೆಯಲ್ಲಿ ಬೇಳೆ-ಕಾಳು, ಎಣ್ಣೆ ಸಿಗುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.