ರೈತರ ಹೋರಾಟ ಬೆಂಬಲಿಸಿ ಸಿಖ್ ಗುರು ಆತ್ಮಹತ್ಯೆ

ನವದೆಹಲಿ,ಡಿ.೧೭- ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಚಳಿ-ಬಿಸಿಲು ಲೆಕ್ಕಿಸದೆ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರೈತರಿಗೆ ಬೆಂಬಲ ಸೂಚಿಸಿ ಸಿಖ್ ಧರ್ಮಗುರು ಆತ್ಮಹತ್ಯೆ ಮಾಡಿಕೊಂಡಿರುವುದು ರೈತರ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚುವಂತಾಗಿದೆ.
ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ೨೨ ದಿನಗಳಿಂದ ರೈತರು ಕೊರೆವ ಚಳಿ, ಮಳೆ ಲೆಕ್ಕಿಸದೆ ನಡೆಸುತ್ತಿರುವ ಹೋರಾಟಕ್ಕೆ ಪಂಜಾಬ್‌ನ ೨ ಸಾವಿರ ವಿಧವೆಯರು ಹೋರಾಟವನ್ನು ಬೆಂಬಲಿಸಿ ಬೀದಿಗಿಳಿದಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವುದು ಹೋರಾಟ ಹೊಸ ತಿರುವು ಪಡೆಯುವಂತಾಗಿದೆ.
ಕೊರೆವ ಚಳಿಯನ್ನೂ ಲೆಕ್ಕಿಸದೆ ದೆಹಲಿಯ ವಿವಿಧ ರಾಜ್ಯಗಳ ಗಡಿ ಸಂಪರ್ಕಿಸುವ ಹೆದ್ದಾರಿಗಳನ್ನು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಿದ್ದರೂ ಕೇಂದ್ರ ಸರ್ಕಾರ ರೈತ ಪರವಾಗಿದೆ ಎಂದು ಹೇಳುತ್ತಿದೆ.
ರೈತರು ಮತ್ತು ಕೇಂದ್ರ ಸರ್ಕಾರದ ಹಗ್ಗಜಗ್ಗಾಟ ಮುಂದುವರೆದಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಅನ್ನದಾತ ಮಾತ್ರ ಕೊರೆವ ಚಳಿಯಲ್ಲಿ ನೂತನ ಕಾಯ್ದೆಯನ್ನು ಹಿಂಪಡೆಯುವಂತೆ ಹೋರಾಟ ನಡೆಸುತ್ತಿದ್ದಾರೆ.
ಪಂಜಾಬ್‌ನಲ್ಲಿ ಕೆಲ ವರ್ಷಗಳಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ೨ ಸಾವಿರಕ್ಕೂ ಹೆಚ್ಚು ಮಹಿಳೆಯರು ರೈತರಿಗೆ ಬೆಂಬಲ ಸೂಚಿಸಿ ನೂರಾರು ಟ್ರ್ಯಾಕ್ಟರ್ ಮತ್ತು ಬಸ್‌ಗಳಲ್ಲಿ ದೆಹಲಿಯ ಟಿಕ್ರಿ ಗಡಿ ಭಾಗಕ್ಕೆ ಆಗಮಿಸಿ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ರೈತರು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳ ಸದಸ್ಯರು ಆತ್ಮಹತ್ಯೆ ಮಾಡಿಕೊಂಡವರ ಭಾವಚಿತ್ರವನ್ನಿಡಿದು ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ಕೂಡಲೇ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಅವರು ಆಗ್ರಹಿಸಿದ್ದಾರೆ.
ಪಂಜಾಬ್‌ನ ಮಾಲ್ವಾ ವಲಯದಿಂದ ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲಿ ೨ ಸಾವಿರಕ್ಕೂ ಹೆಚ್ಚು ಮಹಿಳೆಯರು ಟಿಕ್ರಿ ಗಡಿ ತಲುಪಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಮಹಿಳೆಯರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ತಮ್ಮ ಅಸಹನೆ, ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ.
೨೦೦೭ರಲ್ಲಿ ಪತಿ ಜುಗ್‌ರಾಜ್ ಸಿಂಗ್ ಅವರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ ಎಂದು ೩೪ ವರ್ಷದ ಗುರ್‌ಮೆಹರ್ ಕೌರ್ ತಿಳಿಸಿದ್ದಾರೆ. ಇರುವ ಒಂದೂವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ.
ಆರ್ಥಿಕ ಹೊರೆ ಹೆಚ್ಚಾಗಿದ್ದು, ಸಾಲದಿಂದ ಬಳಲಿ ಹೋಗಿದ್ದೇವೆ. ಇಂತಹ ಸಮಯದಲ್ಲಿ ನೂತನ ಕೃಷಿಕಾಯ್ದೆಗಳು ನಮ್ಮಂತಹ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾರಕವಾಗಲಿದೆ. ಕೂಡಲೇ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.

  • ರೈತರ ಹೋರಾಟ ದಿನೇ ದಿನೇ ತೀವ್ರ.
  • ಕೇಂದ್ರದ ವಿರುದ್ಧ ರೈತರ ಆಕ್ರೋಶ.
  • ೨ ಸಾವಿರಕ್ಕೂ ಹೆಚ್ಚು ವಿಧವೆಯರ ಸಾಥ್.
  • ರೈತರ ಹೋರಾಟ ಬೆಂಬಲಿಸಿ ಧರ್ಮಗುರು ಆತ್ಮಹತ್ಯೆ.
  • ಅನ್ನದಾತನ ಹೋರಾಟಕ್ಕೆ ಹಲವೆಡೆಯಿಂದ ಬೆಂಬಲ.
  • ೨೨ನೇ ದಿನಕ್ಕೆ ಕಾಲಿಟ್ಟ ಅನ್ನದಾತರ ಹೋರಾಟ.


ಸಿಖ್ ಧರ್ಮಗುರು ಆತ್ಮಹತ್ಯೆ
’ರೈತರ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ’. ಹೀಗಂತ ಡೆತ್ ನೋಟ್ ಬರೆದು ಸಿಖ್ ಧರ್ಮ ಗುರು ಒಬ್ಬರು ರೈತರಿಗೆ ಬೆಂಬಲ ಸೂಚಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮೂರು ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ಗಮನ ಹರಿಸದ ಹಿನ್ನೆಲೆಯಲ್ಲಿ ಸಿಖ್ ಧರ್ಮಗುರು ಒಬ್ಬರು ಸಿಂಘು ಗಡಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಧರ್ಮಗುರುವನ್ನು ಕರ್ನಾಲ್ ಜಿಲ್ಲೆಯ ನಿಸ್ಸಿಂಗ್ ಪ್ರದೇಶದ ಸಿಂಗ್ರಾ ಗ್ರಾಮದ ಸಂತ ರಾಮ್‌ಸಿಂಗ್ (೬೫) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲೇ ಧರ್ಮಗುರು ಗುಂಡು ಹಾರಿಸಿಕೊಳ್ಳುತ್ತಿದ್ದಂತೆ ಅವರನ್ನು ಪಾಣಿಪತ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಸೋನಿಪೇಟ್ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಕ್ರೋಶ
ಧರ್ಮಗುರು ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ಅನುಯಾಯಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಸಿಂಗ್ರಾ ಗ್ರಾಮದ ನಾನಕ್‌ಸರ್ ಗುರುದ್ವಾರಕ್ಕೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಧರ್ಮಗುರು ಸಂತ ರಾಮ್‌ಸಿಂಗ್ ಸಾವಿಗೆ ಶಿರೋಮಣಿ ಅಕಾಲಿದಳ, ಎಎಪಿ, ಕಾಂಗ್ರೆಸ್ ನಾಯಕರು ತೀವ್ರ ಬೇಸರ ಹೊರ ಹಾಕಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.