ರೈತರ ಹೋರಾಟ : ಕೇಂದ್ರಕ್ಕೆ ಬಿಸಿತುಪ್ಪ

ನವದೆಹಲಿ, ಜ.೪- ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾನೂನಾತ್ಮಕ ಸ್ಥಾನಮಾನ ನೀಡಬೇಕು ಎಂದು ರೈತರು ಬಿಗಿ ಪಟ್ಟು ಹಿಡಿದಿರುವುದು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ
ರೈತ ಪ್ರತಿನಿಧಿಗಳೊಂದಿಗೆ ಇಂದು ನಡೆಯಲಿರುವ ಏಳನೇ ಸುತ್ತಿನ ಮಾತುಕತೆ ಫಲಪ್ರದವಾಗದಿದ್ದರೆ ಗಣರಾಜ್ಯೋತ್ಸವ ದಿನದಂದು ದೆಹಲಿಗೆ ಪೆರೇಡ್ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿದ್ದು ಸಮಸ್ಯೆ ಇತ್ಯರ್ಥಕ್ಕೆ ತೀವ್ರ ಕಸರತ್ತು ನಡೆಸಿದೆ.
ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಚಳಿ – ಗಾಳಿ – ಮಳೆಯನ್ನೂ ಲೆಕ್ಕಿಸದೆ ತಮ್ಮ ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸುತ್ತಿದ್ದಾರೆ ಇಂದು ನಡೆಯಲಿರುವ ಮಾತುಕತೆ ಯಶಸ್ವಿಯಾದರೆ ಹೋರಾಟ ಹಿಂಪಡೆಯುವ ಬಗ್ಗೆ ಯೋಚಿಸುತ್ತೇವೆ. ಇಲ್ಲದಿದ್ದರೆ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನಾನಿರತ ೪೦ ರೈತ ಸಂಘಟನೆಗಳ ನಾಯಕರೊಂದಿಗೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯುಶ್ ಗೋಯಲ್ ಹಾಗೂ ಸೋಮ್ ಪ್ರಕಾಶ್ ಇಂದು ಸರ್ಕಾರದ ಪರವಾಗಿ ಮಾತುಕತೆ ನಡೆಸಲಿದ್ದಾರೆ .
ಡಿಸೆಂಬರ್ ೩೦ ರಂದು ನಡೆದ ೬ನೇ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ ರೈತರ ನಾಲ್ಕು ಪ್ರಮುಖ ಬೇಡಿಕೆಗಳ ಪೈಕಿ ಎರಡು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿ ಸೂಚಿಸಿದ್ದು ಇನ್ನೆರಡು ಬೇಡಿಕೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.
ರೈತರು ಪ್ರಮುಖವಾಗಿ ಬೇಡಿಕೆ ಇಟ್ಟಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಕಾನೂನಾತ್ಮಕ ರೂಪ ನೀಡುವಂತೆ ಪಟ್ಟು ಹಿಡಿದಿದ್ದಾರೆ ಇಂದಿನ ಸಭೆಯಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ರೈತರ ಪ್ರತಿಭಟನೆ ಮೊಟಕುಗೊಳಿಸಿದ್ದಾರೆ ಇಲ್ಲದಿದ್ದರೆ ಮತ್ತಷ್ಟು ತೀವ್ರ ಕೊಳ್ಳುವುದು ಖಚಿತವಾಗಿದೆ.


ಗಡಿ ಬಂದ್
ಕೃಷಿ ಕಾಯ್ದೆಗಳನ್ನು ಪಡೆಯುವಂತೆ ಆಗ್ರಹಿಸಿ ರೈತರು ದೆಹಲಿಯ ಚಿಲ್ಲಾ,ಗಾಝಿಯಾಬಾದ್, ಗಡಿ ಭಾಗಗಳಲ್ಲಿ ಹೋರಾಟ ಮುಂದುವರಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ ಸಂಪರ್ಕಿಸುವ ಏಳು ಗಡಿಗಳನ್ನು ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರು ಮುಂದಿಟ್ಟಿರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಬಿಗಿಪಟ್ಟು ಮುಂದುವರಿಸಿದ್ದಾರೆ.
ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಕೃಷಿ ಕಾಯ್ದೆ ವಿಚಾರದಲ್ಲಿ ಹಗ್ಗಜಗ್ಗಾಟ ನಡೆಯುತ್ತಿದ್ದು ಇಂದು ನಡೆಯಲಿರುವ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.