ರೈತರ ಹೋರಾಟಕ್ಕೆ ಸಾಹಿತಿ, ಕಲಾವಿದರ ಬೆಂಬಲ


ಬೆಂಗಳೂರು, ಡಿ.೨೮-ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ನಾಡಿನ ಸಾಹಿತಿ-ಕಲಾವಿದರು ನಗರದಲ್ಲಿ ಧರಣಿ ನಡೆಸಿದರು.
ನಗರದ ಆನಂದರಾವ್ ವೃತ್ತದ ಮೌರ್ಯ ಸರ್ಕಲ್ ಬಳಿ ಸೇರಿದ ಹಲವು ಸಾಹಿತಿಗಳು ಕಲಾವಿದರು ನಟರು ರಂಗಭೂಮಿ ನಟರು ದೆಹಲಿಯ ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಂಗಸಂಪದ,ಅವಿಷ್ಕಾರ, ಅಭಿನಯ ತರಂಗ ಬಹುರೂಪಿ, ರಂಗಮಂಟಪ, ಸಾತ್ವಿಕ, ರಂಗ ಸ್ವರೂಪ,ರಂಗಪಯಣ,ಇಪ್ಟಾ,ಜನಪದರು ಸೇರಿದಂತೆ ವಿವಿಧ ಸಂಘಟನೆಗಳ ಸಾಹಿತಿಗಳು ಕಲಾವಿದರು ಧರಣಿಯಲ್ಲಿ ಪಾಲ್ಗೊಂಡು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ರಂಗಭೂಮಿ ನಟ ಚಿತ್ರ ನಿರ್ದೇಶಕ ಬಿ.ಸುರೇಶ್ ಮಾತನಾಡಿ ದೇಶದ ರಾಜಧಾನಿಯ ಕಡೆಯಲ್ಲಿ ಕೊರೆಯುವ ಚಳಿಯನ್ನು ಲೆಕ್ಕಿಸದೆ ಸಾವಿರ ರೈತರು ಕಳೆದ ೩೩ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಅವರಿಗೆ ನಾಡಿನ ಹಲವು ಸಾಹಿತಿಗಳು ಕಲಾವಿದರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ರಂಗಭೂಮಿಯು ಯಾವಾಗಲೂ ಜನಪರ ಪ್ರತಿಭಟನೆಗಳಿಗೆ ಮುಂದೆ ನಿಲ್ಲಲಿದೆ ಅನ್ನದಾತನ ಪ್ರತಿಭಟನೆಗೆ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ತಿಳಿಸಿದರು. ರಂಗಭೂಮಿ ಬಹುತ್ವದ ಜಾತ್ಯಾತೀತ ಶಕ್ತಿ ಪ್ರತಿಭಟನೆಗಳಿಗೆ ಬೆಂಬಲವಾಗಿ ನಿಲ್ಲಲಿದ್ದು ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಲಿರುವ ಧರಣಿಯಲ್ಲಿ ಹಲವು ಸಂಘಟನೆಗಳು ಸಾಹಿತಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಧರಣಿಯಲ್ಲಿ ಪಿಚ್ಚಳ್ಳಿ ಶ್ರೀನಿವಾಸ್, ಕೋಡಿಹಳ್ಳಿ ರಾಮಣ್ಣ,ಆರ್ ಜಿ.ಹಳ್ಳಿ ನಾಗರಾಜ್, ರಂಗಾರೆಡ್ಡಿ ಕೋಡಿರಾಂಪುರ ಸೇರಿ ಹಲವರು ಪಾಲ್ಗೊಂಡಿದ್ದರು.