ರೈತರ ಹೋರಾಟಕ್ಕೆ ವರ್ಷ ಕಣ್ಣೆತ್ತಿ ನೋಡದ ಕೇಂದ್ರ

ನವದೆಹಲಿ, ನ.೧೦- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ನ.೨೬ ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಸಂಸತ್ ಭವನದ ಮುಂದೆ ಪ್ರತಿದಿನ ರೈತರು ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ವಿವಿಧ ರೈತ ಸಂಘಟನೆಗಳು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಅಡಿಯಲ್ಲಿ ಹೋರಾಟ ನಡೆಸುತ್ತಿದ್ದು ನ.೨೯ ರಿಂದ ಪ್ರತಿದಿನ ೫೦೦ ಮಂದಿ ರೈತರು ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ವರ್ಷ ನವಂಬರ್ ೨೬ ರಿಂದ ದೆಹಲಿಯ ವಿವಿಧ ಗಡಿಭಾಗಗಳಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ.
ಪ್ರತಿಭಟನೆಯ ಸಮಯದಲ್ಲಿ ೭೫೦ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ. ಆದರೂ, ಮೃತಪಟ್ಟ ರೈತರಿಗೆ ಕೇಂದ್ರ ಸರ್ಕಾರ ಕನಿಷ್ಠ ಸಂತಾಪವನ್ನು ಹೇಳಿಲ್ಲ ಎನ್ನುವುದು ರೈತರ ಕೋಪ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ತನಕ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ನಾಯಕರು ಎಚ್ಚರಿಕೆ ನೀಡಿದ್ದಾರೆ.
ರೈತರ ಹೋರಾಟಕ್ಕೆ ಒಂದು ವರ್ಷ ಪೂರ್ಣ ಆಗುತ್ತಿರುವ ಹಿನ್ನೆಲೆಯಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ನವೆಂಬರ್ ೨೮ರಂದು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾವಿರಾರು ರೈತರು ದೆಹಲಿಯ ಸಿಂಘು, ಗಾಜಿಯಾಪುರ, ಸಿಕ್ರಿ, ಸೇರಿದಂತೆ ಗಡಿಭಾಗದಲ್ಲಿ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಹಠಕ್ಕೆ ಬಿದ್ದಿರುವ ಕೇಂದ್ರ ಸರಕಾರ ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಿಲ್ಲ ರೈತರು ಎಷ್ಟು ದಿನಗಳು ಪ್ರತಿಭಟನೆ ನಡೆಸುತ್ತಾರೆ ನಡೆಸಲಿ ಎನ್ನುವ ಜಿದ್ದಿಗೆ ಬಿದ್ದಿದೆ.