ರೈತರ ಹೋರಾಟಕ್ಕೆ ಭಾರತೀಯ ಕಿಸಾನ್ ಸಂಘ ಬೆಂಬಲ

ಚಾಮರಾಜನಗರ, ಜು.10:- ಅನೆಮಡುವಿನ ಕೆರೆಗೆ ಉಡಿಗಾಲ ಭಾಗದ ದೊಡ್ಡಮೋರಿ ಮುಖಂತರ ನೀರು ಹರಿಸಬೇಕೆಂದು ಒತ್ತಾಯಿಸಿ, ಉಡಿಗಾಲ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಕಳೆದ 36 ದಿನಗಳಿಂದ ಆಯೋರಾತ್ರಿ ಧರಣಿ ಮಾಡುತ್ತಿದ್ದು, ಅವರ ಹೋರಾಟಕ್ಕೆ ಭಾರತೀಯ ಕಿಸಾನ್ ಸಂಘ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ಇಂದಿನ ಧರಣಿಯಲ್ಲಿ ಭಾಗವಹಿಸಿ, ರೈತರ ಸಮಸ್ಯೆಯನ್ನು ಆಲಿಸಿದರು.
ತಾಲೂಕಿನ ಉಡಿಗಾಲ ಗ್ರಾಮದ ಮುಖ್ಯರಸ್ತೆಯಲ್ಲಿ ಅನೆಮುಡಿನ ಕೆರೆಗೆ ದೊಡ್ಡ ಮೋರಿ ಮುಖಾಂತರ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭಾರತೀಯ ಕಿಸಾನ್ ಸಂಘದ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ರಮೇಶ್ ರಾಜು, ರಾಜ್ಯ ಮಹಿಳಾ ಪ್ರಮುಖ್ ರೂಪಉಡಿಗಾಲ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಪಧಾಧಿಕಾರಿಗಳು ಧರಣಿಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದು ಈ ಭಾಗದ ಲಕ್ಷಾಂತರ ರೈತರಿಗೆ ಒಳ್ಳೆಯದಾಗುವ, ಅಂತರ್‍ಜಲ ವೃದ್ದಿಯಾಗುವಂತೆ ಕಾರ್ಯಕ್ರಮವನ್ನು ಮೊದಲ ಅದ್ಯತೆ ಮೇಲೆ ಕೈಗೆತ್ತಿಗೊಳ್ಳುವಂತೆ ಮನವಿ ಮಾಡಿಕೊಳ್ಳುವುದಾಗಿ ನಾರಾಯಣಸ್ವಾಮಿ ಧರಣಿ ನಿರತ ರೈತರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಳವಳಿ ಬೆಂಬಲಿಸಿ ಮಾತನಾಡಿದ ನಾರಾಯಣಸ್ವಾಮಿ, ಉಡಿಗಾಲ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಕೆರೆಗೆ ನೀರು ತುಂಬಿಸುವ ವಿಚಾರಕ್ಕಾಗಿ ಕಳೆದ 36 ದಿನಗಳಿಂದ ಆಹೋರಾತ್ರಿ ಧರಣಿ ಮಾಡುತ್ತಿರುವುದು ಬೇಸರ ತಂದಿದೆ. ಒಳ್ಳೆಯ ಕಾರ್ಯಗಳು ತಕ್ಷಣದಲ್ಲಿ ಆಗಬೇಕಾಗಿದೆ. ಸರ್ಕಾರ ರೈತರ ಪರವಾದ ಕೆಲಸ ಮಾಡಲಿಕ್ಕೆ ಇರುವುದು. ಹೀಗಾಗಿ ಅನೆಮುಡುವಿನ ಕೆರೆಗೆ ನೀರು ತುಂಬಿಸುವ ನಿಮ್ಮ ಹೋರಾಟಕ್ಕೆ ನಮ್ಮ ಸಂಘದ ಸಂಪೂರ್ಣ ಬೆಂಬಲ ಇದೆ.
ಜು. 11 ರಂದು ನಡೆಯುವ ಜಿಲ್ಲಾಧಿಕಾರಿಗಳ ಮುತ್ತಿಗೆ ಹಾಗೂ ಉಡಿಗಾಲ ಗ್ರಾಮದಿಂದ ಚಾ.ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಎತ್ತುಗಾಡಿ, ಟ್ಯಾಕ್ಟರ್‍ಗಳ ಮೂಲಕ ರೈತರು, ರೈತರ ಮಹಿಳೆಯರು ಮುತ್ತಿಗೆ ಹಾಕುವ ಚಳವಳಿಯಲ್ಲಿ ಭಾರತೀಯ ಕಿಸಾನ್ ಸಂಘ ಭಾಗವಹಿಸಲಿದೆ, ರಾಜಧಾನಿ ಮಟ್ಟದಲ್ಲಿಯೂ ಸಹ ನಿಮ್ಮ ಪರವಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.