ರೈತರ ಹೋರಾಟಕ್ಕೆ ಬೆಂಬಲ: ಲಮಾಣಿ

ಹಾವೇರಿ,ಮೇ31 : ರೈತ ಕುಟುಂಬದ ಹಿನ್ನೆಲೆ ಇರುವ ನನಗೆ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳ ಅರಿವಿದೆ. ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸುವುದು ಸೇರಿದಂತೆ ತಮ್ಮ ಭಾವನೆಗಳಿಗೆ ಸದಾ ಸ್ಪಂದಿಸುವೆ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮನ್ನಾಳುವ ಸರ್ಕಾರಗಳು ರೈತರ ಪರವಾಗಿರಬೇಕು ಎಂಬ ನಿಲುವು ನನ್ನದು. ಸದ್ಯ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ರೈತರ ಮತ್ತು ರೈತ ಸಂಘಟನೆಗಳ ಹೋರಾಟವನ್ನು ಬೆಂಬಲಿಸುವೆ. ಅಷ್ಟೇ ಅಲ್ಲದೇ ರೈತರ ಅನುಕೂಲಕ್ಕೆ ಆರಂಭವಾಗಿರುವ ಎಪಿಎಂಸಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಯತ್ನಿಸುವೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ಕ್ರಿಮಿನಾಶಕಗಳು ಕೈಗೆಟುಕುವ ಬೆಲೆಯಲ್ಲಿ ಸಿಗಬೇಕು. ಈ ನಿಟ್ಟಿನಲ್ಲಿ ನನ್ನ ಬದ್ಧತೆ ರೈತರ ಜೊತೆಗೆ ಇರುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ಮುಂಗಾರು ಬಿತ್ತನೆ ಶುರುವಾಗಿದೆ. ರೈತರಿಗೆ ಬೆಳೆ ವಿಮೆ ಪಾವತಿಸುವುದು ಸೇರಿದಂತೆ ಕೃಷಿ ಕ್ಷೇತ್ರದ ಸಂಕಷ್ಟಗಳ ಪರಿಹಾರ ಹೋರಾಟದಲ್ಲಿ ಶಾಸಕರಾದ ರುದ್ರಪ್ಪ ಲಮಾಣಿ ನಮ್ಮ ಜೊತೆಗಿರಬೇಕು ಎಂದರು.
ರೈತ ಸಂಘದ ತಾಲೂಕಾಧ್ಯಕ್ಷ ರಾಜು ತರ್ಲಘಟ್ಟ, ಉಪಾಧ್ಯಕ್ಷ ಶೇಖಪ್ಪ ಹಲಸೂರು, ಮುಖಂಡರಾದ ಮಲ್ಲಪ್ಪ ಬೆಂಚಳ್ಳಿ, ಪುಟ್ಟಪ್ಪ ಓಂಕಾರಣ್ಣನವರ, ಹನುಮಂತಪ್ಪ ತಳವಾರ, ಪುಟ್ಟಪ್ಪ ಹೊಸಳ್ಳಿ, ಕೋಟೆಪ್ಪ ಅಳಲಗೇರಿ, ಮಹೇಶ ಹೊಗೆಸೊಪ್ಪಿನವರ, ಚನ್ನಪ್ಪ ಮರಡೂರ, ಮುತ್ತಣ್ಣ ಗುಡಗೇರಿ, ಸರಸ್ವತೆವ್ವ ಉಳ್ಳಾಗಡ್ಡಿ, ನಿರ್ಮಲಾ ಭಂಡಾರಿ, ಬಲ್ಕೇಶಬೀ ಬಿ.ಆರ್.ಇ ಉಪಸ್ಥಿತರಿದ್ದರು.