ರೈತರ ಹೊಲಗಳಲ್ಲಿನ ಪಂಪ್ ಸೆಟ್ ಕಳವು ಮಾಡುತ್ತಿದ್ದ ಆರೋಪಿಗಳ ಬಂಧನ

ಬಸವಕಲ್ಯಾಣ:ಮಾ.17: ರೈತರ ಹೊಲಗಳಲ್ಲಿನ ಪಂಪ್ ಸೆಟ್ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿಯ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಪರ್ತಾಪೂರ ಹಾಗೂ ಶಿವಪೂರ ಗ್ರಾಮದ ರೈತರ ಹೊಲಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕಳುವು ಮಾಡುತ್ತಿದ್ದರು. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳರ ಪತ್ತೆಗೆ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಚೆನ್ನಬಸವಣ್ಣ ಲಂಗೋಟಿ ತಿಳಿಸಿದರು.

ಈ ಕುರಿತು ನಗರದ ಸಿಪಿಐ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸುಮಾರು 38 ಸಾವಿರ ರೂ ಮೌಲ್ಯದ ನಾಲ್ಕು ಪಂಪ್ ಸೆಟ್‍ಗಳನ್ನು ಹಾಗೂ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಇವರು ಇದೇ ಮೊದಲ ಬಾರಿ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ಮಾಹಿತಿ ತಿಳಿದು ಬಂದಿದ್ದು ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ನಗರ ಠಾಣೆಯ ಪಿಎಸ್‍ಐ ಮಹಂತೇಶ ಜಿ. ಪಾಟೀಲ, ಕ್ರೈಂ ಪಿಎಸ್‍ಐ ರೇಣುಕಾ ಹಾಗೂ ಸಿಬ್ಬಂದಿಗಳಾದ ಉಮೇಶ ಬಿರಾದಾರ, ಸೀಮನ್, ಫ್ರಾನ್ಸಿಸ್ ಮತ್ತು ಅಶೋಕ ಅರವರನ್ನೊಳಗೊಂಡ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿತ್ತು. ಆರೋಪಿಗಳ ಪತ್ತೆ ಹಚ್ಚಿದ ತಂಡಕ್ಕೆ ನಗದು ರೂಪದಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಬದಲ್ಲಿ ಹುಮನಾಬಾದ ಎಎಸ್‍ಪಿ ಶಿವಾಂಶು ರಾಜಪುತ, ಸಿಪಿಐ ಸುಶೀಲಕುಮಾರ, ಕ್ರೈಂ ಪಿಎಸ್‍ಐ ರೇಣುಕಾ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.