ರೈತರ ಹೆಸರಿನ ಮೇಲೆ ಸಾಲ ಪಡೆದು ವಂಚನೆ: ಯಲಗೋಡ್ ಸಹಕಾರ ಸಂಘದ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ

ಕಲಬುರಗಿ.ಸೆ.15:ಜಿಲ್ಲೆಯ ನೂತನ ಯಡ್ರಾಮಿ ತಾಲ್ಲೂಕಿನ ಯಲಗೋಡ್ ಗ್ರಾಮದ ಸಹಕಾರ ಸಂಘದ ಕಾರ್ಯದರ್ಶಿ ರಾಯಪ್ಪಗೌಡ ಅವರು ಹೊನ್ನಾಳ್, ಚಿಕ್ಕ ಬಿರಾಳ್, ಹಿರಿ ಬಿರಾಳ್, ಹೋತಿನಮಡು, ರಾಂಪೂರ್, ಮಲ್ಲಾ ಬಿ, ಮಲ್ಲಾ ಕೆ, ಮುಂತಾದ ಗ್ರಾಮಗಳ ರೈತರ ನಕಲಿ ಸಹಿ ಮಾಡಿ ರೈತರ ಹೆಸರಿನ ಮೇಲೆ ಸಾಲ ಪಡೆದಿದ್ದು ಕೂಡಲೇ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ರೈತರಿಗೆ ಬರಬೇಕಾದ ಹಣವನ್ನು ಮರಳಿಸಬೇಕು ಎಂದು ಒತ್ತಾಯಿಸಿ ರೈತರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಭೀಮರಾವ್ ಹಾಗೂ ಶೇಖರ್ ಅವರು ಮಾತನಾಡಿ, ಈ ಹಿಂದೆ ಜೇವರ್ಗಿಯಲ್ಲಿ ರೈತರ ಸಾಲದ ಹಣ ವಂಚಿಸಿದ ಆರೋಪದ ಮೇಲೆ ರಾಯಪ್ಪಗೌಡರಿಗೆ ಬಸವೇಶ್ವರ್ ವೃತ್ತದ ಬಳಿ (ದರ್ಶಿನಿ ಹೋಟೆಲ್) ಎದುರಗಡೆ ನೂರಾರು ರೈತರು ಬಟ್ಟೆ ಬಿಚ್ಚಿ ಮನಬಂದಂತೆ ಥಳಿಸಿದ್ದಾರೆ. ರೈತರ ಥಳಿತಕ್ಕೆ ಒಳಗಾಗಿ ಓಡೋಡಿ ಹೋದ ರಾಯಪ್ಪಗೌಡರು ಮಾಜಿ ಶಾಸಕರ (ಕಚೇರಿ) ಹಾಗೂ ಜನ ಔಷಧಿ ಕೇಂದ್ರ ಆಶ್ರಯ ಪಡೆದರು. ಹೊನ್ನಾಳ್ ಕಾರ್ಯದರ್ಶಿ ಪರಶುರಾಮ್ ಮಾಟ್ನಾಳ್ ಅವರು ಎಚ್ಚೆತುಕೊಂಡು ಪರಾರಿಯಾಗಿದ್ದಾರೆ. ಆದಾಗ್ಯೂ, ಆರೋಪಿಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಆದರೆ ರೈತರ ನಕಲಿ ಸಹಿ ಮಾಡಿ ಉದಾಹರಣೆಗೆ ಒಂದೇ ಊರಾದ ಹೊನ್ನಾಳ್ ಗ್ರಾಮದಲ್ಲಿ ಸುಮಾರು 300 ರೈತರ ನಕಲಿ ಸಹಿ ಮಾಡಿ ಮೂರು ಕೋಟಿ ರೂ.ಗಳನ್ನು ಲೂಟಿ ಮಾಡಿದ್ದಾರೆ. ಇನ್ನೂ ನಾಲ್ಕೈದು ಗ್ರಾಮಗಳಲ್ಲಿ ಎಷ್ಟೆಷ್ಟು ನಕಲಿ ರೈತರ ಸಹಿ ಮಾಡಿ ಹೊನ್ನಾಳ್ ಕಾರ್ಯದರ್ಶಿ ಪರಶುರಾಮ್ ಮಾಟ್ನಾಳ್ ಹಾಗೂ ರಾಯಪ್ಪಗೌಡ ಅವರಿಬ್ಬರೂ ರೈತರ ಹೆಸರಿನ ಮೇಲೆ ಸರಕಾರದ ಹಣ ತಿಂದು ತೇಗಿದ್ದಾರೆ ಎಂದು ನೇರವಾಗಿ ಅವರು ಆರೋಪಿಸಿದರು.
ಯಲಗೋಡ್ ವ್ಯಾಪ್ತಿಯ ಹಾಗೂ ಹೊನ್ನಾಳ್ ವ್ಯಾಪ್ತಿಯಲ್ಲಿ ರೈತರ ಹೆಸರಿನ ಮೇಲೆ ನಕಲಿ ಸಹಿ ಮಾಡಿದ್ದರ ಬಗ್ಗೆ ಹಾಗೂ ಸಹಕಾರ ಸಂಘವನ್ನು ದುರಪಯೋಗ ಪಡಿಸಿಕೊಂಡಿದ್ದರ ಬಗ್ಗೆ ಈ ಹಿಂದೆ ಮೇಲಾಧಿಕಾರಿಗಳಿಗೆ ದೂರು ಸಹ ಸಲಿಸಲಾಗಿತ್ತು. ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ರೈತರೇ ಗೂಸಾ ನೀಡಿದರು. ಕೂಡಲೇ ಇನ್ನು ಮೇಲಾದರೂ ಸಹ ರೈತರ ಹೆಸರಿನ ಮೇಲೆ ನಕಲಿ ಸಹಿ ಮಾಡಿ ವಂಚಿಸಿದ ಹಣವನ್ನು ರೈತರಿಗೆ ಮರಳಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲ್ಲೂಕಿನ ಹಲವಾರು ಕೃಷಿ ಪತ್ತಿನ ಸಹಕಾರ ಸಂಘ ಕಾರ್ಯದರ್ಶಿಗಳು ತಾಲ್ಲೂಕಿನ ಹಲವು ಕಡೆ ಆ ಕಡೆಯಿಂದ ಈ ಕಡೆಗೆ ರೈತರ ಹೆಸರಿನ ಮೇಲೆ ಸಾಲ ಪಡೆದಿರುವ ಬಗ್ಗೆ ಯಡ್ರಾಮಿ ತಾಲ್ಲೂಕಿನ ಸಾರ್ವಾಜನಿಕರು ಬಾರಿ ಶಂಕೆ ವ್ಯಕ್ತಪಡಿಸಿದ್ದು, ಆ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರೈತ ಮುಖಂಡ ಭೀಮರಾವ್, ಯುವ ರೈತ ಶೇಖರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಯಲಗೋಡ್ ಗ್ರಾಮದ ಸಹಕಾರ ಸಂಘದ ವ್ಯಾಪ್ತಿಯಲ್ಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.