ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲ

ಸೊರಬ. ಮಾ.29;  ತಾಲೂಕಿನ  ತಾಳಗುಪ್ಪ ಗ್ರಾಮದ  ಬಗರ್ ಹುಕುಂ ರೈತರ ಹಿತ ಕಾಯುವಲ್ಲಿ ಸ್ಥಳೀಯ ಶಾಸಕ ಹಾಗೂ ಸರ್ಕಾರ ವಿಫಲವಾಗಿದೆ ಎಂದು ಜೆಡಿಎಸ್ ನಿಯೋಜಿತ ಅಭ್ಯರ್ಥಿ ಬಾಸೂರು ಚಂದ್ರೇಗೌಡ ಆರೋಪಿಸಿದರು.ತಾಲೂಕಿನ ತಾಳಗುಪ್ಪ ಗ್ರಾಮದ ಸರ್ವೆ ನಂ.20 ರಲ್ಲಿ ಅರಣ್ಯ ಇಲಾಖೆಯಿಂದ ವಶಕ್ಕೆ ಪಡೆದ ಸಾಗುವಳಿ ಜಮೀನಿಗೆ ಭೇಟಿ ನೀಡಿ, ರೈತರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಸುಮಾರು 40-50 ವರ್ಷಗಳಿಂದ ತಾಳಗುಪ್ಪದ ಸರ್ವೆ ನಂ.20 ರಲ್ಲಿ ರೈತರು ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆಯಿಂದ ಅಮಾನವೀಯ ರೀತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದ ಅವರು  ಸುಮಾರು ವರ್ಷಗಳಿಂದ ಫಸಲು ಬರುತ್ತಿದ್ದ ಅಡಿಕೆ ಮರಗಳನ್ನು ಧರೆಗೆ ಉರುಳಿಸಿರುವುದು ಅತ್ಯಂತ ಖಂಡನೀಯ.  ಸರ್ಕಾರ ಮತ್ತು ಜನಪ್ರತಿನಿಧಿಗಳು ರೈತರಿಗೆ ಭದ್ರತೆ ನೀಡುವ ಬದಲು ಒಕ್ಕಲೆಬ್ಬಿಸುತ್ತಿವೆ. ಬದುಕಿನ ಹಕ್ಕಿಗೆ ತೊಂದರೆ ನೀಡುತ್ತಿರುವವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ  ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದ ಅವರು                   ಸರ್ಕಾರ ಕೂಡಲೇ ಸಂತ್ರಸ್ತ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಜೆಡಿಎಸ್ ಅಧ್ಯಕ್ಷ ಎಂ.ಶಿವಪ್ಪ ದ್ವಾರಹಳ್ಳಿ ಮಾತನಾಡಿ, ಸೊರಬ ತಾಲೂಕಿನ ರಾಜಕಾರಣದಲ್ಲಿ ಇತಿಹಾಸ ಮತ್ತು ಕರಾಳ ಘಟನೆ.  ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಗಿಡ-ಮರಗಳನ್ನು ಕಡಿಯಲು ಅವಕಾಶವಿಲ್ಲದಿದ್ದರೂ ಇಲ್ಲಿ ಅಡಿಕೆ ಮರಗಳನ್ನು ಕಡಿದು ಅಮಾನವೀಯವಾಗಿ ವರ್ತಿಸಲಾಗಿದೆ.  ಇನ್ನು ಮುಂದೆ ಇಂತಹ ಘಟನೆ ನಡೆಯಲು ಯಾರೂ ಬಿಡಬಾರದು. ಕೂಡಲೇ ರೈತರು ಎಚ್ಚೆತ್ತುಕೊಂಡು ತಾಲೂಕಿನ ರೈತರು ನಮ್ಮ ಭೂಮಿ, ನಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಿದೆ ಎಂದರು.