ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ


ಧಾರವಾಡ, ನ.4: ರಾಜ್ಯದ ಕಬ್ಬು ಬೆಳೆಗಾರರು ಸೇರಿದಂತೆ, ಎಲ್ಲ ವಿಧದ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಿದೆ. ರೈತರ ಕಲ್ಯಾಣಕ್ಕಾಗಿ ಹಾಗೂ ರೈತ ಉತ್ಪನ್ನಗಳ ನ್ಯಾಯಯುತ ಬೆಲೆಗಾಗಿ ರಾಜ್ಯ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ. ಕೆಲವು ದಿನಗಳಿಂದ ರೈತರು ಹಳಿಯಾಳದ ಪ್ಯಾರಿ ಸಕ್ಕರ ಕಾರ್ಖಾನೆಯವರು ಕಬ್ಬು ಸಾಗಾಣಿಕೆ ಮತ್ತು ಕಬ್ಬು ಕಟಾವು ದರವನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ ಕುರಿತು ಆರೋಪಿಸಿದ್ದು, ಈ ಕುರಿತು ಕಬ್ಬು ಆಯುಕ್ತರ ವರದಿ ಪಡೆದು ಅಗತ್ಯವಿದ್ದಲ್ಲಿ ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಕೈಮಗ್ಗ ಮತ್ತು ಜವಳಿ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹೇಳಿದರು.

ಅವರು ರೈತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಜರುಗಿಸಿ ಮಾತನಾಡಿದರು. 
ಕಳೆದ ಕೆಲವು ದಿನಗಳಿಂದ ಹಳಿಯಾಳದಲ್ಲಿ ರೈತರು ಕಾರ್ಖಾನೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಮತ್ತು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈಗಾಗಲೇ ಕಬ್ಬು ಆಯುಕ್ತರನ್ನು ಸರ್ಕಾರದ ಪ್ರತಿನಿಧಿಯಾಗಿ ರೈತರ ಅಹವಾಲು ಸ್ವೀಕರಿಸಿ ಅಗತ್ಯ ವರದಿ ಸಲ್ಲಿಸಲು ಧಾರವಾಡ ಮತ್ತು ಕಾರವಾರ ಜಿಲ್ಲೆಗೆ ಕಳುಹಿಸಲಾಗಿದೆ. 
ರೈತರು ಸಹಕಾರ ನೀಡಿ ಸರ್ಕಾರದ ರೈತಪರ ಕ್ರಮಗಳಿಗೆ ಬೆಂಬಲಿಸಬೇಕು. ಯಾವುದೇ ಹಂತದಲ್ಲಿ ರೈತರಿಗೆ ತೊಂದರೆಯಾಗದಂತೆ ಮತ್ತು ಕಬ್ಬಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಬರುವ ನವೆಂಬರ್ 10 ರಂದು ಸಕ್ಕರೆ ಕಾರ್ಖಾನೆ ಮಾಲೀಕರ ಮತ್ತು ರೈತರೊಂದಿಗೆ ಸಭೆ ಜರುಗಿಸಲಿದ್ದು, ರೈತರ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿ ಕ್ರಮಕೈಗೊಳ್ಳಲಾಗುವುದೆಂದು ಅವರು ಹೇಳಿದರು.
ರೈತರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದರಿಂದ ಮತ್ತು ಹಳಿಯಾಳ ಪ್ಯಾರಿ ಶುಗರ್ಸ್ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ, ಸೂಕ್ತ ಕ್ರಮ ಜರುಗಿಸಲು ನಿರ್ಧರಿಸಿರುವುದರಿಂದ ರೈತರು ತಕ್ಷಣ ತಮ್ಮ ಧರಣಿಯನ್ನು ಹಿಂಪಡೆಯಬೇಕೆಂದು ಅವರು ಮನವಿ ಮಾಡಿದರು.
ರೈತ ಮುಖಂಡ ಕುರುಬೂರು ಶಾಂತಕುಮಾರ ಸೇರಿದಂತೆ ವಿವಿಧ ರೈತ ಮುಖಂಡರು ರೈತರ ಬೇಡಿಕೆಗಳ ಕುರಿತು ಸಚಿವರೊಂದಿಗೆ ಅಭಿಪ್ರಾಯ ಹಂಚಿಕೊಂಡರು. 

ಕಬ್ಬು ಅಭಿವೃದ್ಧಿ ಆಯುಕ್ತರು ಆಗಿರುವ ಸಕ್ಕರೆ ನಿರ್ದೇಶನಾಲಯದ ನಿರ್ದೇಶಕ ಶಿವಾನಂದ ಎಚ್. ಕಲಕೇರಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸಭೆ ನಿರ್ವಹಿಸಿದರು. ಸಭೆಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಲಾಬೂರಾಮ, ಉಪಪೊಲೀಸ್ ಆಯುಕ್ತರಾದ ಸಾಹೀಲ್ ಬಾಗ್ಲಾ, ಡಾ. ಗೋಪಾಲ ಬ್ಯಾಕೂಡ ಸೇರಿದಂತೆ ವಿವಿಧ ರೈತ ಮುಖಂಡರು ಭಾಗವಹಿಸಿದ್ದರು.