ಬೆಂಗಳೂರು,ಜೂ.೮:ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಕೊಡಬೇಕಾದ ಹಾಲಿನ ಪ್ರೋತ್ಸಾಹ ಧನ ೬೬೯.೫೯ ಕೋಟಿ ಬಾಕಿ ಇದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು. ಈ ಮೂಲಕ ರೈತರ ತುರ್ತು ಅವಶ್ಯಕತೆಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಮೇಲ್ಮನೆ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಬುಧವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅವರು ಪತ್ರ ಬರೆದಿದ್ದು, ಇದು ಕೃಷಿ ಚಟುವಟಿಕೆಯ ಕಾಲವಾಗಿದ್ದು, ರೈತರಿಗೆ ಅನೇಕ ಖರ್ಚುಗಳಿರುತ್ತವೆ.ಮಕ್ಕಳ ಶೈಕ್ಷಣಿಕ ವರ್ಷವೂ ಆರಂಭಗೊಂಡಿದೆ. ಶುಲ್ಕ, ಪುಸ್ತಕ ಖರೀದಿ ಸೇರಿದಂತೆ ಇನ್ನಿತರ ಖರ್ಚುಗಳು, ಪಶು ಆಹಾರ ಖರೀದಿ ಸೇರಿದಂತೆ ಇತ್ಯಾದಿ ಉದ್ದೇಶಗಳಿಗೆ ಹಣದ ಅವಶ್ಯಕತೆ ಇದೆ. ಆದ್ದರಿಂದ ತುರ್ತಾಗಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಕೋರಿದ್ದಾರೆ.
ರಾಜ್ಯಸರ್ಕಾರ ಹೈನುಗಾರರಿಗೆ ಅನುಕೂಲವಾಗಲಿ ಎಂದು ಪ್ರತಿ ಲೀಟರ್ ಹಾಲಿಗೆ ೫ ರೂ. ಪ್ರೋತ್ಸಾಹ ಧನ ನೀಡುತ್ತಾ ಬಂದಿದೆ. ಇದರಿಂದ ಹಾಲು ಉತ್ಪಾದಕರ ರೈತರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ, ಈ ಹಿಂದಿನ ಸರ್ಕಾರ ಕಳೆದ ೭ ತಿಂಗಳಿಂನ ಹೈನುಗಾರಿಕೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿದೆ. ಹೈನುಗಾರರಿಗೆ ಸಮಸ್ಯೆ ಉಂಟು ಮಾಡಿದೆ. ಪ್ರಸ್ತುತ ಸುಮಾರು ೬೬೯.೫೯ ಕೋಟಿ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ಹೈನುಗಾರರಿಗೆ ವಿತರಿಸಲು ಬಾಕಿ ಇದೆ ಎಂದಿದ್ದಾರೆ.
ಪ್ರತಿ ಹೈನುಗಾರರಿಗೆ ಕನಿಷ್ಠ ೫ ಸಾವಿರ ರೂ.ನಿಂದ ೩೦ ಸಾವಿರ ರೂ.ವರೆಗೆ ಪ್ರೋತ್ಸಾಹ ಧನ ಬರುವುದು ಬಾಕಿ ಉಳಿದುಕೊಂಡಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಪಶು ಆಹಾರ, ಮೇವಿನ ದರ ಏರಿಕೆ, ಕೆಲವೆಡೆ ಜಾನುವಾರುಗಳಿಗೆ ಗಂಟು ರೋಗದ ಬಾಧೆ, ಹಾಲಿನ ಇಳುವರಿ ಕುಸಿತ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರಾಜ್ಯದ ಹೈನುಗಾರರ ಹಿತದೃಷ್ಟಿಯಿಂದೂ ಪ್ರೋತ್ಸಾಹ ಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.