ರೈತರ ಹಣ ಪಾವತಿಗೆ ಕಾಂಗ್ರೆಸ್ ಆಗ್ರಹ

ವಿಜಯಪುರ, ಏ ೨೧- ಕಳೆದ ಫೆಬ್ರವರಿಯಲ್ಲಿ ರೈತರಿಂದ ಬೆಂಬಲ ಬೆಲೆಯಲ್ಲಿ ಪಡೆದಿರುವ ರಾಗಿಗೆ ರಾಜ್ಯ ಸರ್ಕಾರ ೨ ತಿಂಗಳಾದರೂ ರೈತರಿಗೆ ಹಣ ನೀಡದೇ, ರೈತರು ಹಣಕ್ಕಾಗಿ ಪರದಾಡುವಂತಾಗಿದ್ದು, ಕೂಡಲೇ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಸದಸ್ಯ ಚೀಮಾಚನಹಳ್ಳಿ ರಾಮಚಂದ್ರಪ್ಪ ಸರ್ಕಾರವನ್ನು ಒತ್ತಾಯಿಸಿರುತ್ತಾರೆ.
ಅವರು ವರದಿಗಾರರೊಂದಿಗೆ ಮಾತನಾಡಿ ಕಳೆದ ೨ತಿಂಗಳ ಹಿಂದೆ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಕೊಂಡಿದ್ದ ಸರ್ಕಾರ ಇದುವರೆಗೂ ರೈತರಿಗೆ ಹಣ ಪಾವತಿ ಮಾಡದೆ ಖಜಾನೆಯಲ್ಲಿ ಹಣವಿಲ್ಲವೆಂದು ಸತಾಯಿಸುತ್ತಾ ಬಂದಿರುತ್ತದೆ.
ಇದೀಗ ಮತ್ತೆ ಮಳೆ ಬರುತ್ತಿದ್ದು ರೈತರು ಉಳುಮೆ ಮಾಡಿ, ಬೆಳೆಗಳನ್ನು ಇಡಲು ಮುಂದಾಗುತ್ತಿದ್ದು ಹಣ ಇಲ್ಲದೆ ರೈತರು ಖಾಸಗಿಯವರಿಂದ ಸಾಲಸೋಲ ಮಾಡಿ ಪರದಾಡುವಂತಾಗಿದೆ ಎಂದು ತಿಳಿಸಿದರು.
ಬಿ ಎಸ್ ಯಡಿಯೂರಪ್ಪರವರ ಬಿಜೆಪಿ ಸರ್ಕಾರ ರೈತಪರ ಸರ್ಕಾರ ಎಂದು ಹೇಳುತ್ತಿರುವುದು ಕೇವಲ ಬೂಟಾಟಿಕೆಯ ಮಾತಾಗಿದ್ದು, ಕಷ್ಟದಲ್ಲಿರುವ ರೈತರನ್ನು ಕೈಹಿಡಿಯುವ ಚಿಂತನೆ ಯಾರಿಗೂ ಇಲ್ಲ ಎಂದರು.
ಕೊರೊನಾ ಪರಿಸ್ಥಿತಿ ನಿರ್ವಹಣೆ ಹೇಗೆ;-ಇಂತಹ ಪರಿಸ್ಥಿತಿಯಲ್ಲಿರುವ ಸರಕಾರ ರೈತರಿಗೆ ನೀಡಲು ಖಜಾನೆಯಲ್ಲಿ ಹಣವಿಲ್ಲವೆಂದು ಹೇಳುತ್ತಿದ್ದು, ಮತ್ತೊಂದೆಡೆ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೇ, ಆಕ್ಸಿಜನ್ ಇಲ್ಲದೇ, ಇದ್ದು, ಹೇಗೆ ನಿಭಾಯಿಸಲು ಸಾಧ್ಯ ಎಂದು ಪ್ರಶ್ನಿಸಿದರು.