ರೈತರ ಸ್ಥಿತಿ ಸುಧಾರಿಸಲು ನರೇಗಾ ಯೋಜನೆ ಅತ್ಯವಶ್ಯಕ: ನೂರ ಜಹಾರ ಖಾನಂ

ರಾಯಚೂರು.ಜು.೨೭- ರೈತರು ರಾಷ್ಟ್ರದ ಆತ್ಮ ಇಂತಹ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆದು, ನರೇಗಾ ಯೋಜನೆಯಡಿ ರೈತ ಸಮುದಾಯದವರಿಗೆ ಕೆಲಸ ನೀಡುವುದರ ಜೊತೆಗೆ ಕೃಷಿಯನ್ನು ಯಶಸ್ವಿ ಮತ್ತು ಲಾಭದಾಯಕವಾಗಿಸಲು, ಸಣ್ಣ ರೈತರ ಸ್ಥಿತಿ ಸುಧಾರಿಸಲು ಅದರಲ್ಲಿ ವಿಶೇಷವಾಗಿ ವೈಯಕ್ತಿಕ ಕಾಮಗಾರಿಗಳಿಗೆ ಅತಿ ಹೆಚ್ಚು ಆಧ್ಯತೆ ನೀಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೂರ ಜಹಾರ ಖಾನಂ ಅವರು ಹೇಳಿದರು.
ಅವರು ಜು.೨೬ರ ಮಂಗಳವಾರ ದಂದು ತಾಲೂಕಿನ ಯರಗೇರಾ ಗ್ರಾಮ ಪಂಚಾಯತಿಯ ತೋಟಗಾರಿಕೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ವಲಯ ವತಿಯಿಂದ ನರೇಗಾ ಯೋಜನೆಯಡಿ ಫಲಾನುಭವಿಗಳಿಗೆ ಸಸಿಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಮಾಡಿದರು.
ಈ ತೋಟಗಾರಿಕೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ವಲಯ ವತಿಯಿಂದ ನರೇಗಾ ಯೋಜನೆಯಡಿ, ಕಳೆದ ವರ್ಷ ಬೆಳೆಸಲಾಗಿರುವ ವಿವಿಧ ಜಾತಿಯ ಸಸಿಗಳಾದ ತೆಂಗು, ನುಗ್ಗೆ, ಪೆರಲಾ, ಸಿತಾಫಲ್, ಕರಿಬೇವು, ಶ್ರೀಗಂಧ, ಹೆಬ್ಬೇವು, ಮಹಾಗನಿ, ಕರಿಜಾಲಿ, ಪಪ್ಪಾಯ, ಪರಂಗಿ, ತಪ್ಸೆ, ನೇರಳೆ, ಅಶೋಕ, ನಿಂಬೆ, ಹೊಂಗೆ, ಬದಾಮ್ ಮುಂತಾದ ಸಸಿಗಳನ್ನು ತಾಲೂಕಿನ ಫಲಾನುಭವಿ ರೈತರಿಗೆ ವಿತರಣೆ ಮಾಡಿದರು.
ರೈತರಿಗೆ ಉತ್ತಮವಾದ ಬೆಲೆ ಬಾಳುವ ಸಸಿಗಳನ್ನು ನೀಡಲಾಗುತ್ತಿದೆ. ಈ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಉತ್ತಮ ರೀತಿಯಿಂದ ಸಂರಕ್ಷಣೆ ಮಾಡಿಕೊಂಡು ಫಲ ಪಡೆದು, ಇವುಗಳಿಂದ ಬರುವ ಲಾಭವನ್ನು ಪಡೆದುಕೊಂಡು ಸುಸ್ಥಿರ ಅಭಿವೃದ್ಧಿ ಹೊಂದುವಂತೆ ಹೇಳಿದರು
ಈ ಸಂದರ್ಭದಲ್ಲಿ ರಾಯಚೂರು ತಾಲೂಕು ಪಂಚಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಮಾರ್, ವಲಯ ಅರಣ್ಯ ಅಧಿಕಾರಿ ನಾಗರಾಜ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.