ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಡಿ. 7ರಂದು ಬೆಳಗಾವಿಯಲ್ಲಿ ಪ್ರತಿಭಟನೆ

ಕಲಬುರಗಿ,ನ.27: ಭೀಕರ ಬರದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಇದೇ ಡಿಸೆಂಬರ್ 7ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಹಾಗಾಗಿ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈಗಾಗಲೇ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಅಧಿವೇಶನದೊಳಗೆ ಬೇಡಿಕೆಗೆ ಸ್ಪಂದಿಸಿ ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದರೆ ಹೋರಾಟವನ್ನು ಹಿಂಪಡೆಯಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ ಬರಗಾಲದಿಂದ ಕೃಷಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪರಿಹಾರ ಕಾರ್ಯಗಳನ್ನು ಆರಂಭಿಸಬೇಕು. ಪ್ರತಿ ಎಕರೆಗೆ ಕನಿಷ್ಠ 30 ಸಾವಿರ ರೂ.ಗಳ ಪರಿಹಾರ ಕೊಡುವಂತೆ, ನಿರಂತರ 12 ಗಂಟೆಗಳ ಕಾಲ ವಿದ್ಯುತ್ ಪೂರೈಸುವಂತೆ, ಪ್ರತಿ ಟನ್ ಕಬ್ಬಿಗೆ 5,500ರೂ.ಗಳ ಬೆಂಬಲ ಬೆಲೆ ನಿಗದಿಗೊಳಿಸುವಂತೆ, ಹತ್ತಿ ಪ್ರತಿ ಕ್ವಿಂಟಲಿಗೆ 15000ರೂ.ಗಳನ್ನು ನಿಗದಿಗೊಳಿಸುವಂತೆ, 60 ವರ್ಷ ವೃದ್ಧ ರೈತರಿಗೆ ಪ್ರತಿ ತಿಂಗಳು 5000ರೂ.ಗಳ ಮಾಶಾಸನ ಕೊಡುವಂತೆ, ತೊಗರಿಗೆ 15000ರೂ.ಗಳ ಬೆಲೆಯನ್ನು ಒದಗಿಸುವಂತೆ, ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಸೇವಕ್ ಸೇರಿ ಎಲ್ಲ ಹುದ್ದೆಗಳನ್ನು ಏಕಕಾಲಕ್ಕೆ ಭರ್ತಿ ಮಾಡುವಂತೆ ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ರೈತರ ಜಮೀನುಗಳನ್ನು ಕಬಳಿಸಿ ಏಳು ಸಿಮೆಂಟ್ ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ. ಆದಾಗ್ಯೂ, ಕಾರ್ಖಾನೆ ಪ್ರಾರಂಭದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದಗಳನ್ನು ಉಲ್ಲಂಘಿಸಲಾಗುತ್ತಿದೆ. ಇದರಿಂದಾಗಿ ರೈತರ ಮಕ್ಕಳಿಗೆ ಉದ್ಯೋಗ ಇಲ್ಲದೇ ಅನ್ಯಾಯಕ್ಕೆ ಒಳಗಾಗಿದ್ದು, ಕೂಡಲೇ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜು ಪವಾರ್, ಗೂಳಪ್ಪಗೌಡ ಪಾಟೀಲ್, ಶಾಂತವೀರಪ್ಪಗೌಡ, ರಾಜು ಪವಾರ್ ನಿಪ್ಪಾಣಿ, ಮಹೇಶಗೌಡ ಸುಬೇದಾರ್, ರಾಕೇಶಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.