
ಕೋಲಾರ,ಏ,೨-ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯ ಮಾರಣಾಂತಿಕ ದಾಳಿ ಖಂಡಿಸಿ ಹಾಗೂ ಬಗರ್ ಹುಕುಂ ಸಾಗುವಳಿಯ ಸಕ್ರಮವಾಗುವ ಅರ್ಜಿಗಳ ಇತ್ಯರ್ಥಕ್ಕೆ ಬಾಕಿ ಇರುವಾಗ ಅರಣ್ಯ ಇಲಾಖೆ ಸೇರಿದಂತೆ ಯಾರು ಕೂಡ ರೈತರ ಸಾಗುವಳಿ ಸ್ವಾಧೀನಕ್ಕೆ ಅಡ್ಡಿ ಮಾಡದಂತೆ ರಕ್ಷಣೆ ನೀಡಲು ಒತ್ತಾಯಿಸಿ ಶುಕ್ರವಾರ ನಗರದ ತಹಸೀಲ್ದಾರ್ ಕಛೇರಿ ಮುಂದೆ ಕೆ.ಪಿ.ಆರ್.ಎಸ್‌ನಿಂದ ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಪಂ ಸುಮಾರು ೩೫ ಗ್ರಾಮಗಳ ಎರಡು ಸಾವಿರಕ್ಕಿಂತಲೂ ಅಧಿಕ ಬಡ ಸಾಗುವಳಿದಾರರು ಹಕ್ಕುಪತ್ರಕ್ಕಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದೇ ಅವರನ್ನು ಅರಣ್ಯ ಇಲಾಖೆಯ ಮೂಲಕ ದೌರ್ಜನ್ಯ ನಡೆಸಿ, ಬೆದರಿಸಿ ಒಕ್ಕಲೆಬ್ಬಿಸಿ, ಬೀದಿಗೆ ತಳ್ಳುವ ಹೇಯ ಕೃತ್ಯ ಮಾಡಿದ್ದಾರೆ, ಇದನ್ನು ಕೂಡಲೇ ನಿಲ್ಲಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘವು ತುಮಕೂರು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯನ್ನು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ರಾಜಕೀಯ ಪೇರಿತವಾಗಿ ರೈತರ ಮೇಲಿನ ದೌರ್ಜನ್ಯ ನಡೆಸಿರುವ ಗುಬ್ಬಿ ಎಸಿಎಫ್ ಮಹೇಶ್, ರೇಂಜರ್ ಅಧಿಕಾರಿ ದುಗ್ಗಯ್ಯ ಮುಂತಾದ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಬೇಕು ಮತ್ತು ಒಕ್ಕಲೆಬ್ಬಿಸುವ ಕುತಂತ್ರಗಳನ್ನು ಕೂಡಲೇ ನಿಲ್ಲಿಸಬೇಕು, ಸಾಗುವಳಿದಾರರನ್ನು ಅರಣ್ಯ ಇಲಾಖೆ ನಡೆಸಿರುವ ಮಾರಣಾಂತಿಕ ದಾಳಿಯಿಂದ ಸಂಘಟನೆಯ ಗುಬ್ಬಿ ತಾಲ್ಲೂಕು ಅಧ್ಯಕ್ಷ ದೊಡ್ಡ ನಂಜಯ್ಯ ತಲೆಗೆ ತೀವ್ರ ಪೆಟ್ಟಾಗಿದ್ದು, ಜೀವನ್ಮರಣ ಪರಿಸ್ಥಿತಿಯಲ್ಲಿ ಇದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಸೇರಿದಂತೆ ಹತ್ತಾರು ಮಹಿಳೆಯರು ಪುರುಷರಿಗೆ ತೀವ್ರ ರಕ್ತಸ್ರಾವದ ಪೆಟ್ಟಾಗಿತ್ತು, ಇದು ದಬ್ಬಾಳಿಕೆಯ ಮತ್ತೊಂದು ವಿಧಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ರೈತರ ಸಾಗುವಳಿ ಸ್ವಾಧೀನಕ್ಕೆ ಅಡ್ಡಿಪಡಿಸದಂತೆ ರಕ್ಷಣೆ ನೀಡಬೇಕು, ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಬೇಕು, ಇಂತಹ ಘಟನೆಗಳು ನಡೆಯಲು ಕಾರಣವಾದ ಪೋಲಿಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ಎಂ.ವಿಜಯಕೃಷ್ಣ, ಕೆ.ಪಿ.ಆರ್.ಎಸ್ ಮುಖಂಡರಾದ ಪಾತಕೋಟ ನವೀನ್ ಕುಮಾರ್, ವಿ.ನಾರಾಯಣರೆಡ್ಡಿ, ಸೈಯದ್ ಫಾರೂಕ್, ಕೆ.ವೆಂಕಟಪ್ಪ, ಸಿಂಗಪುರ್ ನಾರಾಯಣಸ್ವಾಮಿ, ಶಿವರಾಜ್, ವಿ.ವೆಂಕಟೇಶಪ್ಪ, ಅಪ್ಪಯ್ಯಣ್ಣ, ಮಂಜುಳಮ್ಮ, ಚಿನ್ನಮ್ಮ, ಎಂ.ಭೀಮರಾಜ್, ನಾರಾಯಣಪ್ಪ ಇದ್ದರು