ರೈತರ ಸಾಂಘಿಕ ಹೋರಾಟಕ್ಕೆ ಜಯ ದೊರೆತಿದೆ: ಮಲಕಾರಿ


ಧಾರವಾಡ, ನ 20: ರೈತರ ಮರಣ ಶಾಸನಗಳಾದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಕೇಂದ್ರದ ನಿರ್ಧಾರ ಸ್ವಾಗತಾರ್ಹ. ಕೊನೆಗೂ ರೈತರ ಸಾಂಘಿಕ ಹೋರಾಟಕ್ಕೆ ಫಲ ಸಿಕ್ಕಿದೆ. ಇದು ದೇಶದ ರೈತರಿಗೆ ದೊರೆತ ನೈತಿಕ ಜಯ ಎಂದು ರೈತ ಹೋರಾಟಗಾರರು ಕಾಂಗ್ರೆಸ್ ಮುಖಂಡರಾದ ಬಸವರಾಜ ಮಲಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ರೈತರ ಪಾಲಿಗೆ ಮರಣ ಶಾಸನವಾಗಿದ್ದ 3 ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ನಿರಂತರ ಹೋರಾಟ ಮಾಡಿದ್ದಾರೆ. ಈ ಹೋರಾಟದಲ್ಲಿ ಅದೆಷ್ಟೋ ರೈತರು ಹುತಾತ್ಮರಾಗಿದ್ದಾರೆ. ಇಂದು ಆ ಹುತಾತ್ಮ ರೈತರ ಆತ್ಮಕ್ಕೆ ಶಾಂತಿ ಸಿಕ್ಕಿದ ದಿನ. ನಾವೂ ಕೂಡ ಈ ಭಾಗದಲ್ಲಿ ರೈತ ಪ್ರತಿಭಟನೆಗಳು ಹೋರಾಟಗಳು ಹಾಗೂ ಪತ್ರಿಕಾ ಹೇಳಿಕೆಗಳನ್ನು ನಿರಂತರವಾಗಿ ನಡೆಸಿದ ನೆಮ್ಮದಿ ಸಿಕ್ಕಂತಾಗಿದೆ ಎಂದರು.
ಇತ್ತೀಚೆಗೆ ನಡೆದ ಉಪಚುನಾವಣೆಗಳ ಸೋಲು ಹಾಗೂ ಮುಂಬರಲಿರುವ ಉ.ಪ್ರದೇಶ ಚುನಾವಣೆಯೇ ಕಾಯ್ದೆ ವಾಪಾಸಾತಿಗೆ ನೈಜ ಕಾರಣ. ರೈತರನ್ನು ಕೆಣಕಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅಂತಿಮ ಸತ್ಯವನ್ನು ಬಿಜೆಪಿ ಸರ್ಕಾರ ಮನವರಿಕೆ ಮಾಡಿಕೊಂಡಿದೆ. ಇನ್ನುಮುಂದೆ ರೈತರು ಜನಸಾಮಾನ್ಯರು ಈ ಬಂಡವಾಳ ಶಾಹಿಗಳ ಸರ್ಕಾರವನ್ನು ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ ಪ್ರಧಾನಿ ನರೇಂದ್ರ ಮೋದಿಯವರು ಕಾಯ್ದೆ ವಾಪಸಾತಿಯ ಬಗ್ಗೆ ಬರೀ ಹೇಳಿಕೆ ಕೊಟ್ಟರೆ ಸಾಲದು ಸಂಸತ್ತಿನಲ್ಲಿ ಅನುಮೋದನೆ ಆಗಬೇಕು. ಅಷ್ಟೇ ಅಲ್ಲದೇ ಹೋರಾಟದಲ್ಲಿ ಮಡಿದ ನೂರಾರು ಮುಗ್ದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಮಲಕಾರಿ ಒತ್ತಾಯಿಸಿದ್ದಾರೆ.