ರೈತರ ಸಮಸ್ಯೆ ಪರಿಹರಿಸಲು ಮೋದಿ ಮೇಲೆ ಒತ್ತಡ ಹೇರಲು ಬೋರಿಸ್‌ಗೆ ಮನವಿ

ಚಂಢೀಘಡ.ಜ೯- ಭಾರತದಲ್ಲಿನ ರೈತರ ಹೋರಾಟ ಸಮಸ್ಯೆಯನ್ನು ಪರಿಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರುವಂತೆ, ಸುಮಾರು ೧೦೦ ಬ್ರಿಟಿಷ್ ಸಂಸತ್ ಸದಸ್ಯರು ಆ ರಾಷ್ಟ್ರದ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಪತ್ರ ಬರೆದಿದ್ದಾರೆ.
ಸ್ಲಗ್ ನಿಂದ ಗೆದ್ದು ಬ್ರಿಟನ್ ಸಂಸತ್ತಿನ ಸದಸ್ಯರಾಗಿರುವ ತನ್ ದೇಶಿ, ಜನವರಿ ೫ ರಂದು ಜಾನ್ಸನ್ ಅವರಿಗೆ ಬರೆದಿರುವ ಪತ್ರ ಬಹಿರಂಗವಾಗಿದೆ.
ಪಂಜಾಬ್ ಮತ್ತಿತರ ಭಾಗಗಳಿಂದ ದೆಹಲಿಗೆ ಬಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಜಲ ಫಿರಂಗಿ, ಅಶ್ರುವಾಯು ಪ್ರಯೋಗಿಸಿ, ವಿವೇಚನೆ ಇಲ್ಲದೆ ಪೊಲೀಸ್ ಬಲದ ಮೂಲಕ ಧ್ವನಿ ಅಡಗಿಸುವ ವಿಡಿಯೋ ದೃಶ್ಯಾವಳಿಗಳನ್ನು ನೋಡಿದರೆ ಭಯಾನಕವಾಗಿದೆ. ಈ ವಿಚಾರ ಪಂಜಾಬ್ ಮತ್ತು ಸಿಖ್ ಭಾಗಗಳಿಂದ ಬಂದಿರುವ ಅನಿವಾಸಿ ಭಾರತೀಯ ಸಮುದಾಯದಲ್ಲೂ ದಿಗ್ರ್ಬಮೆ ಮೂಡಿಸಿದೆ. ಇಂಗ್ಲೆಂಡ್ ಸೇರಿದಂತೆ ವಿಶ್ವದ ಮತ್ತಿತರ ಕಡೆಗಳಲ್ಲಿ ಸುಮಾರು ೧೦ಸಾವಿರ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನಿಮ್ಮ ಭಾರತ ಭೇಟಿ ರದ್ದಾಗಿದೆ ಎಂಬುದು ಗೊತ್ತಿದೆ. ಆದರೆ, ಶೀಘ್ರದಲ್ಲಿಯೇ ಭಾರತದ ಪ್ರಧಾನಿಯನ್ನು ಭೇಟಿ ಮಾಡಿ, ಈ ವಿಚಾರವನ್ನು ತುರ್ತಾಗಿ ಪರಿಹರಿಸಬೇಕಾಗಿದೆ. ಮೋದಿಯನ್ನು ಮನವೊಲಿಸಿ, ಪ್ರಜಾಸತಾತ್ಮಕ ಶಾಂತಿಯುತ ಪ್ರತಿಭಟನೆಯ ಮಾನವ ಹಕ್ಕುಗಳು ಮತ್ತು ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸವಿದೆ. ನಿಮ್ಮ ಸೂಕ್ತ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿರುವುದಾಗಿ ಪತ್ರದಲ್ಲಿ ಬರೆಯಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನ ಮತ್ತೊಂದು ಪಕ್ಷ ಕೂಡಾ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದಿದ್ದು, ಶೀಘ್ರದಲ್ಲಿಯೇ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಡಿಸೆಂಬರ್ ತಿಂಗಳಲ್ಲಿ ಪ್ರಧಾನಿ ಜೊತೆಗೆ ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಅವರು ಪ್ರಸ್ತಾಪ ಮಾಡಲಿಲ್ಲ.