ರೈತರ ಸಮಸ್ಯೆಗೆ ಸ್ಪಂದಿಸದ ಸರ್ಕಾರ : ಡಿಕೆಶಿ ಪ್ರಹಾರ

ಹುಬ್ಬಳ್ಳಿ, ಮೇ 31: ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರಿಗೆ ಘೋಷಿತ ಪರಿಹಾರ ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸರ್ಕಾರದ ಮೇಲೆ ಹರಿಹಾಯ್ದರು.

ರೈತರ ಸಮಸ್ಯೆಯನ್ನು ಆಲಿಸಲು ಇಲ್ಲಿನ ರಾಯಾಪೂರ ಪ್ರದೇಶದ ರೈತರ ಜಮೀನುಗಳಿಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಪರಿಹಾರ ಘೋಷಿಸಿದೆ. ಪರಿಹಾರ ಇನ್ನೂ ಅವರ ಕೈಗೆ ಸಿಕ್ಕಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ರೈತರಿಗೆ ತರಕಾರಿ ಮಾರಾಟಕ್ಕೆ ಕೇವಲ ಎರೆಡು ಗಂಟೆ ಅವಕಾಶ ನೀಡುತ್ತಾರೆ. ಆದರೆ ಮದ್ಯ ಮಾರಾಟಕ್ಕೆ ಹೆಚ್ಚಿನ ಕಾಲಾವಕಾಶ ನೀಡುತ್ತಾರೆ. ಸರ್ಕಾರಕ್ಕೆ ಕಣ್ಣು, ಹೃದಯ ಇದೆಯಾ ? ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಕೊಡಬೇಕು. ಸಮಸ್ಯೆಗಳನ್ನು ಆಲಿಸಲು ನಾನು ಹೇಳಿದ ಮೇಲೆ ಕೆಲವು ಸಚಿವರನ್ನು ಜಿಲ್ಲೆಗೆ ಕಳುಹಿಸಿದಿರಿ ಎಂದು ದೂರಿದರು.

ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಾಕ್‍ಡೌನ್ ವಿಸ್ತರಣೆ ಬಗ್ಗೆ ನಾನೇನನ್ನು ಹೇಳುವುದಿಲ್ಲ. ಇದು ಸರ್ಕಾರದ ನಿರ್ಧಾರ. ಈ ಬಗ್ಗೆ ಅವರು ಏನಾದರೂ ತೀರ್ಮಾನ ತೆಗೆದುಕೊಳ್ಳಲಿ. ನನಗೆ ಸರ್ಕಾರ ಈ ಬಗ್ಗೆ ಕೇಳಿದರೆ, ಅಭಿಪ್ರಾಯ ತಿಳಿಸುತ್ತೇನೆ. ಆ ಸಂದರ್ಭದಲ್ಲಿ ನಾನು ಸರ್ಕಾರಕ್ಕೆ ಉತ್ತರ ಕೊಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಪ್ರಸಾದ ಅಬ್ಬಯ್ಯ, ಅಲ್ತಾಫ ಹಳ್ಳೂರ, ರಾಬರ್ಟ ದದ್ದಾಪುರಿ, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಣಕಲ್‍ನಲ್ಲಿ ಆಶಾ ಕಾರ್ಯಕರ್ತೆಯರ ಬವಣೆಯನ್ನು ಡಿ.ಕೆ. ಶಿವಕುಮಾರ ಆಲಿಸಿದರು.

ಬಾಕ್ಸ್:
ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ರಾಯಾಪೂರ ಪ್ರದೇಶದ ರೈತರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಡಿ.ಕೆ. ಶಿವಕುಮಾರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಕೊರೊನಾ ಸಂದರ್ಭದಲ್ಲಿ ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ. ಪೊಲೀಸರು ಮಾರಾಟ ಮಾಡಲು ಬಿಡುತ್ತಿಲ್ಲ ಎಂದು ಮೆಣಸಿನಕಾಯಿ, ಟೊಮೆಟೋ, ಬಿಟ್ರೂಟ್ ಕಿತ್ತು ತಂದು ತೋರಿಸಿದರು. ನಲವತ್ತು ರೂ. ಇದ್ದ ಮೆಣಸಿನಕಾಯಿಯನ್ನು ಈಗ ಒಂದು ರೂಪಾಯಿಗೂ ಯಾರೂ ಕೇಳುತ್ತಿಲ್ಲ. ಅಲ್ಲದೆ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಸಮರ್ಪಕವಾಗಿ ವಿತರಣೆ ಆಗುತ್ತಿಲ್ಲ. ಬಿತ್ತನೆ ಬೀಜ ವಿತರಣೆ ಕೇವಲ 5 ಎಕರೆಗೆ ಮಾತ್ರ ನೀಡಲಾಗುತ್ತಿದೆ. 8-10 ಎಕರೆ ಜಮೀನು ಇದ್ದ ರೈತರಿಗೆ ಬಿತ್ತನೆ ಬೀಜದ ಕೊರತೆಯಾಗುತ್ತಿದೆ. ಇನ್ನುಳಿದ ಜಮೀನಿಗೆ ಬೀಜ ಎಲ್ಲಿಂದ ತರುವುದು. ರಸಗೊಬ್ಬರ ಸಹ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ರೈತರು ಡಿ.ಕೆ. ಶಿವಕುಮಾರ ಮುಂದೆ ಸಮಸ್ಯೆ ಬಿಚ್ಚಿಟ್ಟರು.