ರೈತರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ

ಮಾಲೂರು.ಏ೪:ತಾಲೂಕು ಆಡಳಿತ ರೈತರ ಸಮಸ್ಯೆಗಳನ್ನು ನಿವಾರಿಸುವಂತೆ ಹಾಗೂ ಕೆಲವು ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ವತಿಯಿಂದ ತಾಲೂಕು ಕಚೇರಿ ಮುಂಭಾಗ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಮಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ರಾಮೇಗೌಡ ತಾಲ್ಲೂಕಿನಲ್ಲಿ ರೈತರು ಹಾಗೂ ಬಡವರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗ್ರಾಮೀಣ ಪ್ರದೇಶದ ರೈತರು ಹಾಗೂ ಬಡವರ ಸಮಸ್ಯೆಗಳನ್ನು ತಾಲೂಕು ಆಡಳಿತ ಬಗೆಹರಿಸುವಲ್ಲಿ ವಿಫಲವಾಗಿದೆ. ಅಕ್ರಮಗಳು ನಡೆಯುತ್ತಿದ್ದರೂ ತಾಲ್ಲೂಕು ಆಡಳಿತದ ಅಧಿಕಾರಿಗಳು ನಿಯಂತ್ರಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದಾರೆ. ತಾಲೂಕಿನ ಲಕ್ಕೂರು ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ರಾಜಕಾಲುವೆ ಕೆರೆ-ಕುಂಟೆ ಸ್ಮಶಾನ ಗುಂಡುತೋಪುಗಳನ್ನು ಸರ್ವೆ ಮಾಡಿಸಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು. ರೈತರಿಗೆ ಕಂದಾಯ ಇಲಾಖೆ ವತಿಯಿಂದ ಮಂಜೂರಾಗಿರುವ ಭೂಮಿಗೆ ಸಾಗುವಳಿ ಚೀಟಿ ವಿತರಣೆಯಾಗದೆ ರೈತರಿಗೆ ತೊಂದರೆಯಾಗುತ್ತಿದೆ. ತಾಲೂಕಿನಾದ್ಯಂತ ರೈತರು ಹಾಗೂ ಬಡ ಜನತೆಗೆ ಅನುಕೂಲವಾಗುವ ಪೋಡಿ ಅದಾಲತ್‌ನ್ನು ಮುಂದುವರಿಸಬೇಕು. ಸರಕಾರಿ ಜಮೀನುಗಳಲ್ಲಿ ಸ್ವಾಧೀನದಲ್ಲಿರುವ ರೈತರು ಭೂ ಮಂಜೂರಾತಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ವಿಲೆಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ಮಾತ್ರ ಮಂಜೂರಾತಿಯನ್ನು ನೀಡಬೇಕು. ಕೆಸಿ ವ್ಯಾಲಿ ನೀರು ಸರಬರಾಜು ವಿಚಾರದಲ್ಲಿ ಜಿಲ್ಲಾಡಳಿತವು ನೀರನ್ನು ಹರಿಸುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ತಾಲೂಕಿಗೆ ನೀಡಬೇಕಾಗಿರುವ ನೀರಿನ ಪ್ರಮಾಣವನ್ನು ಹರಿಸುವಂತೆ ಒತ್ತಾಯಿಸಿದರು. ಹಲವು ರೀತಿಯ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಸಿಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ, ತಾಲೂಕು ಅಧ್ಯಕ್ಷ ಕೆ. ನರಸಿಂಹಯ್ಯ ಕೋಲಾರ ತಾಲೂಕ ಅಧ್ಯಕ್ಷರಮೇಶ್, ಜಿಲ್ಲಾ ಸಂಚಾಲಕರಾದ ಶ್ರೀನಾಥ್, ನಾಗರಾಜ್ ಗೌರವಾಧ್ಯಕ್ಷ ಗೋಪಾಲ, ಸಂಪಂಗಿ ರಾಮೇಗೌಡ ಉಪಾಧ್ಯಕ್ಷ ನಾರಾಯಣಸ್ವಾಮಿ ಪ್ರಧಾನ ಕಾರ್ಯದರ್ಶಿ ಮುನೇಗೌಡ ಕಾರ್ಯದರ್ಶಿ ಆನಂದ್ ಕುಮಾರ್ ಖಜಾಂಚಿ ವೆಂಕಟಾಚಲ, ವಿನೋದ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.