ರೈತರ ಸದಾ ಕಾಳಜಿಗೆ ನಮೋ : ಗದ್ದಿಗೌಡರ

ಬಾಗಲಕೋಟೆ, ಡಿ. 26 : ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಅನ್ನದಾತರ ಬಗ್ಗೆ ಸದಾ ಚಿಂತನೆ ಮಾಡುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಬೇರೆ ಬೇರೆ ಬದಲಾವಣೆಯನ್ನು ಮಾಡುವ ಮೂಲಕ ಕೃಷಿ ಉದ್ಯೋಗದಲ್ಲಿ ಸಾಕಷ್ಟು ಅನುಕೂಲವನ್ನು ರೈತರಿಗೆ ಮಾಡಿಕೊಟ್ಟಿದ್ದಾರೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸುಶಾಸನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತರ ಖಾತೆಗಳಿಗೆ ಶುಕ್ರವಾರ ನೇರವಾಗಿ 2000 ರೂ.ಗಳನ್ನು ಜಮೆ ಮಾಡಿಸಿದ್ದನ್ನು ನೋಡಿದರೆ ರೈತರ ಬಗ್ಗೆ ಎಷ್ಟು ಕಾಳಜಿಯನ್ನು ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ರೈತರು ಬೆಳೆದಂತಹ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪಕ್ಷದ ಸಂಘಟನೆ ಮಾಡಿದ ಕಾರ್ಯವನ್ನು ಇದೇ ಸಂದರ್ಭದಲ್ಲಿ ಸಂಸದರು ಶ್ಲಾಘಿಸಿದರು.
ಶಾಸಕರು ಹಾಗೂ ಬಿಟಿಡಿಎ ಅಧ್ಯಕ್ಷರಾದ ವೀರಣ್ಣ ಚರಂತಿಮಠ ಮಾತನಾಡಿ, ಅಜಾತ ಶತ್ರುವಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಬಿಜೆಪಿಯನ್ನು ದೊಡ್ಡಮಟ್ಟದಲ್ಲಿ ಸದೃಢವಾಗಿ ಸಂಘಟಿಸಿದ್ದಾರೆ. ದೇಶದ ಪ್ರಧಾನಿಯಾದ ಬಳಿಕ ದೇಶದ ರಸ್ತೆಗಳ ಅಭಿವೃದ್ದಿಗಾಗಿ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆ ಜಾರಿ ಮಾಡಿ ಗ್ರಾಮಗಳ ರಸ್ತೆಯನ್ನು ಡಾಂಬರೀಕರಣ ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ರೈತರ ಖಾತೆಗೆ ವರ್ಷದಲ್ಲಿ ಮೂರು ಕಂತಿನಲ್ಲಿ ಹಾಕುವ ಹಣದಲ್ಲಿ ರೂ.2000 ಹಣವನ್ನು ನೇರವಾಗಿ ಲಕ್ಷಾಂತರ ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡುವ ಮೂಲಕ ಅಟಲ್‍ಜೀಯವರ ಆಶಯವನ್ನು ಈಡೇರಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದರಿಂದ ಸಾಕಷ್ಟು ಅನುಕೂಲ ರೈತರಿಗೆ ಆಗಿದೆ. ಸದಾ ರೈತರ ಬಗ್ಗೆ ಪ್ರಧಾನಿಯವರು ಕಾಳಜಿ ಹೊಂದಿದ್ದಾರೆ. ಇದಲ್ಲದೇ ರೈತರ ಜತೆಗೆ ದೇಶದ ಜನರಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ರಾಜು ರೇವಣಕರ, ಜಯಂತ ಕುರಂದವಾಡ, ಅಶೋಕ ಲಿಂಬಾವಳಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.