ರೈತರ ಷರತ್ತು ಕೇಂದ್ರಕ್ಕೆ ನುಂಗಲಾರದ ತುತ್ತು

ನವದೆಹಲಿ, ಡಿ. ೨೪. ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ನೀತಿಗೆ ಕಾನೂನುಬದ್ಧ ರೂಪ ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಪಟ್ಟುಹಿಡಿದು ರೈತರು ಪ್ರತಿಭಟನೆ ಮುಂದುವರಿಸಿರುವುದು ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಸುಮಾರು ಒಂದು ತಿಂಗಳಿಂದ ಪ್ರತಿಭಟನೆ ಮುಂದುವರಿಸಿರುವ ರೈತ ಸಂಘಟನೆಗಳು ಈ ಬೇಡಿಕೆಗಳು ಈಡೇರಿದರೆ ಮಾತ್ರ ಮಾತುಕತೆಗೆ ಸಿದ್ಧ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಸಿದ್ಧ ಎಂಬ ಸರ್ಕಾರದ ಭರವಸೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಪ್ರತಿಭಟನೆ ನಿರತ ರೈತರು ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರ ಸ್ಪಷ್ಟ ಹಾಗೂ ಲಿಖಿತ ಭರವಸೆ ನೀಡದ ಹೊರತು ಮಾತುಕತೆಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
ರಾಷ್ಟ್ರದ ರಾಜಧಾನಿ ದೆಹಲಿ ಸುತ್ತಮುತ್ತ ಗಡಿಪ್ರದೇಶಗಳಲ್ಲಿ ಕೊರೆಯುವ ಚಳಿಯಲ್ಲೂ ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದು, ಪ್ರತಿಭಟನೆ ಕೈಬಿಟ್ಟು ಸರ್ಕಾರದ ಜೊತೆಗೆ ಮಾತುಕತೆಗೆ ಬರುವಂತೆ ಕೇಂದ್ರದ ಕೃಷಿ ಸಚಿವರು ಸೇರಿದಂತೆ ಹಲವಾರು ಸಚಿವರು ಮಾಡಿರುವ ಮನವಿಗೆ ರೈತರು ಸೊಪ್ಪುಹಾಕಿಲ್ಲ.
ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು ಹಾಗೂ ಬೆಂಬಲ ಬೆಲೆ ನೀತಿಗೆ ಕಾನೂನುಬದ್ಧ ಖಾತರಿ ದೊರೆಯಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವ ಕುರಿತು ಲಿಖಿತ ಭರವಸೆ ದೊರೆಯದ ಹೊರತು ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ರೈತ ಸಂಘಟನೆಗಳು ಸರ್ಕಾರಕ್ಕೆ ತಿಳಿಸಿವೆ.
ಈ ನಡುವೆ ಸಂಧಾನ ಮಾತುಕತೆ ನಡೆಸಲು ಮುಂದಾಗಿರುವ ಸರ್ಕಾರದ ಪ್ರಸ್ತಾಪವನ್ನು ರೈತರು ತಿರಸ್ಕರಿಸಿದ್ದಾರೆ. ಪ್ರೇಮ ಪತ್ರ ಬರೆಯುವುದನ್ನು ಕೈಬಿಟ್ಟು ನಮ್ಮ ಬೇಡಿಕೆಗಳ ಈಡೇರಿಕೆಗೆ ಖಚಿತವಾದ ಲಿಖಿತವಾದ ಭರವಸೆ ದೊರೆಯದ ಹೊರತು ಮಾತುಕತೆ ನಡೆಸುವುದು ಯಾವುದೇ ಪ್ರಯೋಜನ ತರುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮಾತುಕತೆಗೆ ಬರುವಂತೆ ನಿನ್ನೆಯೂ ರೈತ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಕೊರೆಯುವ ಚಳಿಯಲ್ಲಿ ಸಹಸ್ರಾರು ರೈತರು ಪ್ರತಿಭಟನೆ ನಡೆಸುವುದರ ಜೊತೆಗೆ ಬೀದಿಬದಿಯಲ್ಲಿ ನಿದ್ದೆ ಮಾಡುತ್ತಿರುವ ವಿಚಾರ ತೀವ್ರ ಕಳವಳ ತಂದಿದೆ ಎಂದು ಅವರು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲವಾಗಲಿವೆ. ಅದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಕಾಯ್ದೆಗಳಲ್ಲಿ ಕೆಲವು ತಿದ್ದುಪಡಿ ಮಾಡಲು ಮತ್ತು ರೈತರ ಬೇಡಿಕೆಗಳ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲು ಸರ್ಕಾರ ಸಿದ್ಧ ಎಂದು ಈ ತಿಂಗಳ ೯ರಂದು ಬರೆದಿದ್ದ ಕೇಂದ್ರದ ಪತ್ರವನ್ನು ವೈದ್ಯರು ತಿರಸ್ಕರಿಸಿದ್ದಾರೆ. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ರೈತ ಸಂಘಟನೆಗಳ ಮುಖಂಡ ದರ್ಶನ್ ಪಾಲ್ ಅವರು, ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರ ಸ್ಪಷ್ಟ ಭರವಸೆ ನೀಡಿದರೆ ಮಾತ್ರ ಮಾತುಕತೆಗೆ ಬರಲು ಸಿದ್ಧ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ರೈತರೊಂದಿಗೆ ನಾಳೆ ಪ್ರಧಾನಿ ಸಂವಾದ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ದೇಶದ ವಿವಿಧ ಆರು ರಾಜ್ಯಗಳ ರೈತರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಕುರಿತು ಮನವರಿಕೆ ಮಾಡಿಕೊಳ್ಳಲದ್ದಾರೆ.
ಅಲ್ಲದೆ ಅವರು,ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ .. ಪಿಎಂ ಕಿಸಾನ್ ಯೋಜನೆ ಅಡಿ ಮುಂದಿನ ಕಂತಿನ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಿದ್ದಾರೆ.
೯ ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ ೧೮೦೦೦ ಕೋಟಿಗೂ ಅಧಿಕ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ನರೇಂದ್ರ ಮೋದಿಯವರು ನೇರ ವರ್ಗಾವಣೆ ಮಾಡಲಿದ್ದಾರೆ.

ಮಾತುಕತೆಗೆ ಸಿದ್ಧ ಪುನರುಚ್ಚಾರ
ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಪುನರುಚ್ಚರಿಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ಸರ್ಕಾರದ ಪ್ರಸ್ತಾವನೆಗಳ ಕುರಿತು ರೈತರು ತಮ್ಮ ಪ್ರತಿಕ್ರಿಯೆ ನೀಡಬೇಕು ಅಥವ ಸಲಹೆ-ಸಚನೆಗಳು ಇದ್ದರೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಸರ್ಕಾರ ಮುಂದಿಟ್ಟಿರುವ ಪ್ರಸ್ತಾವನೆ ಕುರಿತು ರೈತಸಂಘಟನೆಗಳು ಮಾತುಕತೆ ನಡೆಸಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಲಿದ್ದಾರೆ ಬಗ್ಗೆ ತಮಗೆ ಸಂಪೂರ್ಣ ವಿಶ್ವಾಸ ಮತ್ತು ಆಶಾವಾದ ಇದೆ ಎಂದು ಅವರು ಹೇಳಿದ್ದಾರೆ.
ನಮ್ಮ ಪ್ರಸ್ತಾವನೆಗಳು ಕುರಿತು ರೈತರೊಂದಿಗೆ ಮುಕ್ತವಾಗಿ ಚರ್ಚಿಸಿ ಸಲಹೆ-ಸೂಚನೆಗಳಿಗೆ ಕಳುಹಿಸಿಕೊಡಬೇಕು. ಸರ್ಕಾರದ ಜೊತೆಗೆ ಮಾತುಕತೆ ನಡೆಸುವ ಕುರಿತು ದಿನಾಂಕ ನಿಗದಿ ಪಡಿಸಬೇಕು. ಅವರೆಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಮಾತುಕತೆಯ ಸಮಯವನ್ನು ನಿಗದಿ ಪಡಿಸಲಿ ಎಂದು ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.