
ಗೌರಿಬಿದನೂರು, ಫೆ.೨೨- ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಅವರ ಬದುಕಿಗೆ ಆತ್ಮಸ್ಥೈರ್ಯ ಹೆಚ್ಚಿಸಲಾಗಿದೆ. ರೈತರು ಕೃಷಿ ಚಟುವಟಿಕೆಗಳನ್ನು ಸಕ್ರಿಯವಾಗಿ ಮಾಡಲು ಬಡ್ಡಿರಹಿತವಾಗಿ ಸಾಲದ ಸೌಲಭ್ಯ ನೀಡಲಾಗುವುದು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ತಾಲ್ಲೂಕಿನ ಕುರೂಡಿಯಲ್ಲಿ ಡಿಸಿಸಿ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಿದ್ದ ರೈತರಿಗೆ ಸಾಲದ ಎ.ಟಿ.ಎಂ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲೆಡೆ ಅಂತರ್ಜಲದ ಮಟ್ಟ ವೃದ್ಧಿಯಾಗಿದ್ದು ರೈತರು ತಮ್ಮ ಜಮೀನಿನಲ್ಲಿ ಕಬ್ಬು ಬೆಳೆಯುವ ಮೂಲಕ ಈ ಭಾಗದಲ್ಲಿ ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡಬೇಕಾಗಿದೆ. ಕೃಷಿ ಚಟುವಟಿಕೆಗಳ ಜತೆಗೆ ಹೈನುಗಾರಿಕೆಯನ್ನು ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕಾಗಿದೆ. ರೈತರ ಬದುಕನ್ನು ಹಸನು ಮಾಡಲು ಡಿಸಿಸಿ ಬ್ಯಾಂಕ್ ಬದ್ಧವಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಮರಳೂರು ಹನುಮಂತರೆಡ್ಡಿ ಮಾತನಾಡಿ, ರೈತರಿಗೆ ಸುಮಾರು ೩ ಕೋಟಿಗೂ ಅಧಿಕ ಬಡ್ಡಿರಹಿತವಾಗಿ ಸಾಲದ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ಜತೆಗೆ ಹೈನುಗಾರಿಕೆಯನ್ನು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪ್ರತೀ ರೈತರಿಗೆ ಸುಮಾರು ೫ ಲಕ್ಷದವರೆಗೆ ಬಡ್ಡಿರಹಿತವಾಗಿ ನೀಡುವ ಭರವಸೆ ನೀಡಿದ್ದಾರೆ. ಸ್ಥಳೀಯ ಶಾಸಕರ ಕೈಯನ್ನು ನಾವೆಲ್ಲರೂ ಸೇರಿ ಮತ್ತೊಮ್ಮ ಬಲಪಡಿಸಿದಲ್ಲಿ ಮತ್ತಷ್ಟು ಸಾಲದ ಸೌಲಭ್ಯ ಮತ್ತು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆರ್ಥಿಕ ನೆರವಿನಿಂದ ಕುರೂಡಿ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ೯೮ ರೈತರಿಗೆ ಒಟ್ಟು ೯೯.೭೧ ಲಕ್ಷ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಬ್ಯಾಂಕ್ ನ ವ್ಯವಸ್ಥಾಪಕರಾದ ಮಹಮದ್ ಅಸ್ಲಾಂ ತಿಳಿಸಿದರು.