ರೈತರ ಶಕ್ತಿಗೆ ತಲೆಬಾಗಿದ ಮೋದಿ


ಬೆಂಗಳೂರು, ನ. ೨೦- ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಶಕ್ತಿಗೆ ತಲೆಬಾಗಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಹೇಳಿದ್ದಾರೆ.
ರೈತರ ಬದುಕಿಗೆ ಮತ್ತು ದೇಶದ ಕೃಷಿ ವ್ಯವಸ್ಥೆಗೆ ದಮನಕಾರಿಯಾಗಿದ್ದ ಮತ್ತು ಮಣ್ಣಿನ ಮಕ್ಕಳ ಚಾರಿತ್ರಿಕ ಪ್ರತಿಭಟನೆಗೆ ಕಾರಣವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಪ್ರತಿಭಟನೆಯೂ ಕೂಡಾ ಪ್ರಜಾಸತ್ತತೆಯ ಭಾಗವಾಗಿದೆ. ಈ ಪ್ರತಿಭಟನೆಗೆ ಬಲಿಷ್ಠ ಪ್ರಧಾನಿ ಎನ್ನಿಸಲ್ಪಟ್ಟ ನರೇಂದ್ರ ಮೋದಿ ಅವರು ಕೂಡಾ ಮಣಿದಿರುವುದು ರೈತಾಪಿ ಜನರ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಯಾವತ್ತೂ ರೈತರ ಪರವಾಗಿದ್ದು, ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಲಿದೆ. ಪಂಜಾಬ್, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಜನಾಕ್ರೋಶಕ್ಕೆ ಬೆದರಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಮತ್ತೆ ಹಿಂಬಾಗಿಲಿನಿಂದ ಇಂಥ ಏಕಪಕ್ಷೀಯ ಕಾಯ್ದೆಗಳು ಮುಂದಿನ ದಿನಗಳಲ್ಲಿ ಜಾರಿಯಾಗದಿರಲಿ ಎಂದು ಅವರು ಆಶಿಸಿದ್ದಾರೆ.