ರೈತರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಸಂಜೆವಾಣಿ ವಾರ್ತೆ,
ವಿಜಯಪುರ,ಫೆ.12:ಈಗಾಗಲೇ 5 ಜನಪರ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ, ಮುಂದೆಯೂ ಮಾಡಿಕೊಂಡು ಹೋಗುತ್ತೇವೆ. ರಾಜ್ಯದ ಭೀಕರ ಬರಗಾಲದ ನಿಮಿತ್ಯ ಕೇಂದ್ರಕ್ಕೆ 3 ಬಾರಿ ಮನವಿ ಮಾಡಿ 1,87,000 ಕೋಟಿ ಬಿಡುಗಡೆ ಮಾಡಬೇಕೆಂದು ಕೇಳಿದ್ದೇವೆ. ಆದರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಇಲ್ಲಿಯವರೆಗೆ ಒಂದು ನಯಾ ಪೈಸೆ ಕೂಡಾ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಮುಖಂಡರಿಗೆ ತಿಳಿಸಿದರು.
2024-25 ನೇ ಸಾಲಿನ ಬಜೆಟ್ ಅಧಿವೇಶನ ನಿಮಿತ್ತ ಪೂರ್ವಭಾವಿಯಾಗಿ ಕರೆದ ರಾಜ್ಯದ ಎಲ್ಲಾ ರೈತ ಮುಖಂಡರ ಸಭೆಯಲ್ಲಿ ಅವರು ತಿಳಿಸಿದರು.
ಬರಗಾಲದ ನಿಮಿತ್ತ ಕುಡಿಯುವ ನೀರು, ಜಾನುವಾರುÀಗಳಿಗೆ ಮೇವು ಸೇರಿದಂತೆ ಅನುಕೂಲ ಕಲ್ಪಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಣ ಮೀಸಲಿಟ್ಟು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ. ನಾನು ಕೂಡಾ ರೈತ ಸಂಘದಿಂದ ಬಂದಿರುವವನು. ರೈತರ ಕಷ್ಟ ಗೊತ್ತಿದೆ, ರೈತರ ಪರವಾಗಿ ಯಾವಾಗಲೂ ಇರುತ್ತೇನೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಕೂಡಲೇ ಕೆ.ಬಿ.ಜೆ.ಎನ್.ಎಲ್ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರಿಸಬೇಕು. ಕೃಷ್ಣಾ ಕಣಿವೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು, ಆಲಮಟ್ಟಿ ಜಲಾಶಯದ ಎತ್ತರವನ್ನು 519.06 ರಿಂದ 524.256 ಮೀಟರ್ ಎತ್ತರಕ್ಕೆ ಎತ್ತರಿಸಬೇಕು. ನಷ್ಟ ಪರಿಹಾರ ಹಾಗೂ ಪುರ್ನವಸತಿ ನೀಡಬೇಕು. ಜಿಲ್ಲೆಯಲ್ಲಿ ಮಾಡಲಾಗಿರುವ ಎಲ್ಲಾ ನೀರಾವರಿ ಯೋಜನೆಯ ಕಾಲುವೆ ಹಾಗೂ ಉಪ ಕಾಲುವೆಗಳಲ್ಲಿ ಮಣ್ಣು ಬಿದ್ದು, ಜಾಲಿಕಂಟಿಗಳು ಬೆಳೆದು ನೀರು ಸಾಗುತ್ತಿಲ್ಲ, ಮುಂಜಾಗೃತವಾಗಿ ಮಳೆಗಾಲಕ್ಕೂ ಮುಂಚಿತವಾಗಿಯೇ ವ್ಯವಸ್ಥೆ ಮಾಡಬೇಕು, ಅದಕ್ಕಾಗಿ ಪ್ರತ್ಯೇಕ ಹಣ ಮೀಸಲಿಡಬೇಕು. ಬರಗಾಲದ ನಿಮಿತ್ತ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಬರಗಾಲ ನಿವಾರಣೆಗೆ ಮುಂಜಾಗೃತವಾಗಿ ವಿಶೇಷ ಯೋಜನೆ ರೂಪಿಸಬೇಕು ಎಂದರು.
ಇದೇ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ರೈತರಿಗೆ ಕಂಟಕವಾಗಿರುವ ಕೃಷಿ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆಗಳನ್ನು ಕೇಂದ್ರ ಸರಕಾರ ರೈತರ ಹೋರಾಟದ ಫಲವಾಗಿ ಮಂಡಿಯೂರಿ ಬೇಷರತ್ತಾಗಿ ಮರಳಿ ಪಡೆದಿದೆ. ಆದರೆ ಆಗಿನ ಬಿಜೆಪಿ ಸರಕಾರ ಅದನ್ನು ಮುಂದುವರೆಸಿಕೊಂಡು ಬಂದಿತ್ತು, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣದಲ್ಲಿ ರೈತರಿಗೆ ಮಾರಕವಾಗಿರುವ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತೆವೆ ಎಂದು ಹೇಳಿರುವ ಸರಕಾರ ಇನ್ನು ಮರಳಿ ಪಡೆದಿಲ್ಲ, ಕೂಡಲೇ ಹಿಂಪಡೆಯಬೇಕು, ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆಯುತ್ತಿರುವ ಲಿಂಬೆ, ದಾಳಿಂಬೆ, ದ್ರಾಕ್ಷಿಗೆ, ಡ್ರ್ಯಾಗನ್, ಹಣ್ಣುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಅದರ ಉಪ ಉತ್ಪನ್ನಗಳನ್ನು ಮಾಡುವಂತೆ ಉತ್ತೇಜಿಸುವ ಯೋಜನೆ ಮಾಡಬೇಕು. ಅತೀ ಹೆಚ್ಚು ಬೆಳೆಯುತ್ತಿರುವ ತೊಗರಿ ಮೆಣಸಿನಕಾಯಿ, ಅಜಿವಾನ, ಮೆಕ್ಕೆಜೋಳ, ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಇದೇ ವೇಳೆ ಕೊಲ್ಹಾರ ತಾಲುಕಾ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ, ವಿದ್ಯುತ್ ಅಕ್ರಮ ಸಕ್ರಮ ಮೊದಲಿನಂತೆ ಮುಂದುವರೆಸಬೇಕು, ರೈತರ ಕೃಷಿ ಪಂಪಸೆಟ್‍ಗಳಿಗೆ ಹಗಲು 12 ಗಂಟೆ 3 ಫೇಸï ಹಾಗೂ ರಾತ್ರಿ ಸಿಂಗಲ್ ಫೇಸ್ ಉಚಿತ ವಿದ್ಯುತ್ ನೀಡಬೇಕು, ರೈತರಿಗೆ ಇಲ್ಲಿಯವರೆಗೆ 3-4 ವರ್ಷಗಳಿಂದ ಬಾಕಿ ಉಳಿದ ಬೆಳೆ ವಿಮೆಯನ್ನು ಕೂಡಲೇ ಕೊಡಬೇಕು., ತಾರತಮ್ಯ ಮಾಡದೇ ಏಕರೂಪದಲ್ಲಿ ಕಬ್ಬಿಗೆ ಪ್ರತಿ ಟನ್‍ಗೆ 3500 ರೂಪಾಯಿ ಬೆಲೆ ಘೋಷóಣೆ ಮಾಡಿ, ಕಬ್ಬಿಗೂ ವಿಮೆ ವ್ಯವಸ್ಥೆ ಮಾಡಬೇಕು. ಜೊತೆಗೆ ತೂಕದಲ್ಲಿ ಆಗುತ್ತಿರುವ ಅನ್ಯಾಯವನ್ನು ಬಗೆಹರಿಸಬೇಕು. ಎಂದರು.
2012ರಲ್ಲಿ ಮುಳವಾಡ ಗ್ರಾಮದ ರೈತರ 3220 ಎಕರೆ ಕೆ.ಐ.ಡಿ.ಬಿಗಾಗಿ ಮೀಸಲಿಟ್ಟು ಇಲ್ಲಿಯವರೆಗೆ ಆ ಜಾಗದಲ್ಲಿ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ, ರೈತರು ತಮ್ಮ ಕಲಿತ ನಿರುದ್ಯೋಗಿ ಮಕ್ಕಳಿಗೆ ಉದ್ಯೋಗ ಸೀಗುವುದು ಎನ್ನುವ ಉದ್ದೇಶÀದಿಂದ ತಮ್ಮ ಬೆಲೆಬಾಳುವ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ, ಅಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಲಕ್ಷ್ಮಣ ಹಂಚಿನಾಳ, ಅಶೋಕ ಕಳಸಗೊಂಡ, ಸಂತೋಷ ಹಂಚಿನಾಳ, ಅಭಿಷೇಕ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.