ರೈತರ ಲಾಭಕ್ಕಾಗಿ ಬಿಎಸ್.ಎಸ್‍ಕೆ ಕಾರ್ಖಾನೆ ಗುತ್ತಿಗೆ ನೀಡಿ :ಸುಭಾಷ್ ಕಲ್ಲೂರ್

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಆ.19:ಹಳ್ಳಿಖೇಡ (ಬಿ) 398 ಕೋಟಿ ಸಾಲದಲ್ಲಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ಪಂದಿಸಿದ್ದಾರೆ ಎಂದು ಕಾರ್ಖಾನೆಯ ಅಧ್ಯಕ್ಷ ಸುಭಾಷ್ ಕಲ್ಲೂರ್ ಅವರು ತಿಳಿಸಿದರು.
ಹಳ್ಳಿಖೇಡ (ಬಿ) ಪಟ್ಟಣದ ಹೊರ ವಲಯದ ಬಿಎಸ್.ಎಸ್‍ಕೆ ಕಾರಖಾನೆಯ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೀದ ಜಿಲ್ಲೆಯ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಮುಚ್ಚಿರುವ ಸಕ್ಕರೆ ಕಾರಖಾನೆ ಕಳೆದ ವರ್ಷ ಪ್ರಾರಂಭಿಸಲಾಗಿತ್ತು. 398 ಕೋಟಿ ಸಾಲದ ಸುಳಿಯಲ್ಲಿರುವ ಈ ಕಾರ್ಖಾನೆ ಪುನಃ ಪ್ರಾರಂಭ ಮಾಡುವುದಕ್ಕಾಗಿ ಗುತ್ತಿಗೆ ಷರತ್ತುಗಳಲ್ಲಿ ಸಡಿಲಿಕೆ ಮಾಡುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಬೇಕು ಎಂದು ತಿಳಿಸಿದರು.
ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಉದ್ದೇಶದಿಂದ ಕಾರಖಾನೆ ಆಡಳಿತ ಮಂಡಳಿ ವತಿಯಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದು, ಸಕ್ಕರೆ ಮಂತ್ರಿ ಮೂಲಕ ಮುಖ್ಯಮಂತ್ರಿಗಳಿಗೆ ಕಾರ್ಖಾನೆ ಕುರಿತು ಸಮಗ್ರ ಮಾಹಿತಿ ನೀಡಲಾಗಿತ್ತು. ಬಳಿಕ ಸರಕಾರದ ಆದೇಶದ ಮೇರೆಗೆ ಹರಾಜು ಪ್ರಕ್ರಿಯೆ ಕರೆಯಲಾಗಿತ್ತು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಗುತ್ತಿಗೆ ಪಡೆಯುವ ವ್ಯಕ್ತಿಗಳು ಒನ್ ಟೈಮ್ ಸೆಟಲ್ ಮೆಂಟ್ ಮಾಡಬೇಕು ಎಂದು ಷರತ್ತುಗಳನ್ನು ಹಾಕಿದಾರೆ ಎಂದು ತಿಳಿಸಿದರು.
ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ‘ನಾವು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ನಯಾ ಪೈಸೆ ಇರಲಿಲ್ಲ. ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಸಂಪೂರ್ಣ ಹಾಳಾಗಿತ್ತು. ಈ ಹಿಂದೆ 5 ವರ್ಷ ಸಂಜಯ್ ಖೇಣಿ ಅಧಿಕಾರ ಮಾಡಿದ್ದಾರೆ. ಅವರ ಅವಧಿಯಲ್ಲಿ ಲೆಕ್ಕ ಪತ್ರ ಇರಲಿಲ್ಲ. ಸರ್ಕಾರದಿಂದ 130 ಕೋಟಿ ಅನುದಾನ ನೀಡಿದರು ಸಹ ಇವರು ಕಾರ್ಖಾನೆ ಪ್ರಾರಂಭ
ಮಾಡಿರಲಿಲ್ಲ. ಆದರೆ ನಾವು ರೈತರ ಹಿತದೃಷ್ಟಿಯಿಂದ ಕಾರ್ಖಾನೆಯಲ್ಲಿ 310 ಇರದಿದ್ದರೂ ಒಂದು ವರ್ಷ ಕಾರ್ಖಾನೆ ಪ್ರಾರಂಭಿಸಿ ಕಬ್ಬು ನುರಿಸಿದ್ದೇವೆ. ಎಂದರು.
ಈ ಇದೇ ವೇಳೆ ವ್ಯವಸ್ಥಾಪಕ ನಿರ್ದೇಶಕ ದಿಗಂಬರ ಸ್ವಾಮಿ, ನಿರ್ದೇಶಕರಾದ ಮಲ್ಲಿಕಾ ರ್ಜುನ್ ಪಾಟೀಲ್, ರಾಜಪ್ಪ ಸುಲ್ತಾನಬಾದ್ ವಾಡಿ, ವಿಶ್ವನಾಥ ಪಾಟೀಲ್ ಮಾಡಗೂಳ, ಪ್ರಮುಖರಾದ ಪ್ರಕಾಶ ತಿಬಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗೇಶ ಕಲ್ಲೂರ, ಆಕಾಶ ಕಲ್ಲೂರ ಇದ್ದರು.

ಈ ಭಾಗದ ರೈತರಿಗೆ ಅನುಕೂಲಕ್ಕೆ ಗುತ್ತಿಗೆ ಪಡೆಯಲು ಸಿದ್ದ
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ನೀಡಿದರೆ ತೆಗೆದುಕೊಳ್ಳುತ್ತೇನೆ. ಆದರೆ ಕೆಲವು ಷರತ್ತುಗಳು ಸಡಿಲ ಮಾಡಿದರೆ ಯೋಚನೆ ಮಾಡಿ ಈ ಭಾಗದ ರೈತರ ಅನುಕೂಲಕ್ಕಾಗಿ ಗುತ್ತಿಗೆ ಪಡೆಯುತ್ತೇನೆ ಎಂದು ಹಳ್ಳಿಖೇಡ್ ಬಿ.ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ, ಮಾಜಿ ಶಾಸಕ ಸುಭಾಷ ಕಲ್ಲೂರ್ ಸೇರಿದಂತೆ ಇತರರು ಇದ್ದರು.

ಬಸನಗೌಡ ಪಾಟೀಲ ಯತ್ನಾಳ ಶಾಸಕ ಬಿಜಾಪುರ್