ರೈತರ ರಿಯಾಯಿತಿ ಬಡ್ಡಿ ಸಾಲಕ್ಕೆ ಸರ್ಕಾರದ ನಿರ್ಬಂಧ

ಕೈ ಬಿಡಲು ಆರ್ಯಾಪು ಸಹಕಾರ ಸಂಘದ ಆಗ್ರಹ

ಪುತ್ತೂರು, ನ.೮- ಸರಕಾರಿ ನೌಕರರಿಗೆ, ಪಿಂಚಣಿ ಪಡೆಯುವವರಿಗೆ ಹಾಗೂ ಆದಾಯ ತೆರಿಗೆ ಪಾವತಿದಾರರಿಗೆ ಶೂನ್ಯ ಬಡ್ಡಿದರದ ಬೆಳೆ ಸಾಲ ಹಾಗೂ ಶೇಖಡಾ ೩ ರ ಬಡ್ಡಿಯ ದೀರ್ಘಾವಧಿ ಸಾಲಗಳನ್ನು ನೀಡಬಾರದೆಂದು ಹಾಗೂ ೨೦೨೦-೨೧ ರ ನಂತರ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ೨೦೦೪ ರಿಂದ ಒಂದು ಕುಟುಂಬದ ಎಲ್ಲಾ ಸದಸ್ಯರು ಸೇರಿ ರೂಪಾಯಿ ೪ ಲಕ್ಷಗಳ ವರೆಗಿನ ಬಡ್ಡಿ ಸಹಾಯಧನ ಪಡೆದಿದ್ದಲ್ಲಿ ಮುಂದಕ್ಕೆ ಶೇಕಡಾ ೩% ದರದ ಸಾಲವನ್ನು ನೀಡಬಾರದೆಂದು ಸರ್ಕಾರ ವಿಧಿಸಿರುವ ನಿರ್ಬಂಧವನ್ನು ಕೈ ಬಿಡಬೇಕು ಎಂದು ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ಸಭೆಯಲ್ಲಿ ಆಗ್ರಹಿಸಲಾಯಿತು.

ಪುತ್ತೂರು ತಾಲೂಕು ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸಭೆ ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಅವರ  ಅಧ್ಯಕ್ಷತೆಯಲ್ಲಿ ನಡೆಯಿತು.

ಈ ನಿರ್ಬಂಧದ ಕುರಿತು ಮಾತನಾಡಿದ ಅಧ್ಯಕ್ಷ ಮಹಮ್ಮದ್ ಆಲಿ ಅವರು ರೈತರ ಹಿತ ರಕ್ಷಣೆ ಮಾಡುತ್ತೇವೆ, ರೈತರಿಗೆ ಎಲ್ಲಾ ಸವಲತ್ತನ್ನು ಒದಗಿಸುತ್ತೇವೆ, ನಾವು ರೈತರ ಪರ ಎಂದು ಹೇಳುತ್ತಿರುವ  ರಾಜ್ಯ ಸರ್ಕಾರವು ಈಗ ರೈತರಲ್ಲಿ ವರ್ಗೀಕರಣ ಮಾಡಿ ಇಂತವರಿಗೆ ಸಾಲ ನೀಡಬಾರದೆಂದು ನಿರ್ಬಂಧ ವಿಧಿಸಿರುವುದು ರೈತ ವಿರೋಧಿ ಧೋರಣೆಯಾಗಿದೆ.  ಸರಕಾರಿ ನೌಕರರು, ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು ರೈತರಾಗಿ ಕೃಷಿ ಚಟುವಟಿಕೆ ನಡೆಸಬಾರದು ಎಂಬ ನಿಲುವು ಸರ್ಕಾರದ್ದಾಗಿದೆ.  ಕೃಷಿಕ ದೇಶದ ಬೆನ್ನೆಲುಬು, ಕೃಷಿಕನಲ್ಲಿ ತಾರತಮ್ಯ ಮಾಡಬಾರದು. ರೈತರ ಹಿತದೃಷ್ಟಿಯಿಂದ ಸರ್ಕಾರವು ಈಗ ವಿಧಿಸಿರುವ ನಿರ್ಬಂಧವನ್ನು ತಕ್ಷಣವೇ ಕೈ ಬಿಡಬೇಕು ಎಂಬ ಹಕ್ಕೊತ್ತಾಯ ನಿರ್ಣಯವನ್ನು ಕೈಗೊಳ್ಳಲಾಯಿತು. 

ಶೂನ್ಯ ಬಡ್ಡಿಯಲ್ಲಿ ಬೆಳೆಸಾಲ ಪಡಕೊಂಡ ಸದಸ್ಯ ಅವಧಿಗೆ ಮೊದಲೇ ಸಾಲ ಮರುಪಾವತಿಸಿದರೆ ಅವನಿಗೆ ಶೂನ್ಯ ಬಡ್ಡಿ ವಿಧಿಸದೆ ಪೂರ್ಣ ಬಡ್ಡಿ ವಿಧಿಸಬೇಕೆಂಬ ಸರ್ಕಾರದ ಆದೇಶ ಅವೈಜ್ಞಾನಿಕವಾಗಿರುತ್ತದೆ. ಸಾಲದ ಅವಧಿ ಮುಗಿದರೂ ಸಾಲ ಕಟ್ಟದ ರೈತನಿಗೆ  ಬಡ್ಡಿ ರಿಯಾಯಿತಿ  ಇಲ್ಲವೆಂಬುದು ಸರಿಯಾದ ನಿರ್ಧಾರ.  ಆದರೆ ಅವಧಿಗೆ ಮುನ್ನಾ ಪಾವತಿಸಿದ ರೈತನಿಗೆ ಬಡ್ಡಿ ಇಲ್ಲ ಎಂಬ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ  ಜಯಂತಿ ಭಾಸ್ಕರ್ , ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ನಿರ್ದೇಶಕರಾದ ಸತೀಶ್ ನಾಕ್ ಪರ್ಲಡ್ಕ, ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಮೂಲೆ ಆರ್ಯಾಪು, ಗಣೇಶ್ ರೈ ಬಳ್ಳಮಜಲು, ಸಂಶುದ್ದೀನ್ ನೀರ್ಕಜೆ, ತಿಮ್ಮಪ್ಪ ನಾಯ್ಕ ಜಂಗಮುಗೇರು, ಇಸ್ಮಾಯಿಲ್ ಮಲಾರು, ಹಾರಿಸ್ ಸಂಟ್ಯಾರು, ಚಂದ್ರಕಲಾ ಓಟೆತ್ತಿಮಾರು ಉಪಸ್ಥಿತರಿದ್ದರು.