ರೈತರ ಮೇಲೆ ಹಲ್ಲೆ ಪ್ರಕರಣ : ಮೂರು ದಶಕದ ಮಹತ್ವದ ತೀರ್ಪು

ಮೂರು ವರ್ಷ ಕಾರಾಗೃಹ : ರೈತ ಹೋರಾಟಕ್ಕೆ ಸಂದ ಜಯ
ರಾಯಚೂರು.ಏ.07- ಮಾನ್ವಿ ತಾಲೂಕಿನ ತಡಕಲ್ ಗ್ರಾಮದ ಆರ್‌ಡಿಸಿಸಿ ಬ್ಯಾಂಕಿನಿಂದ ರೈತರ ಮನೆ ಜಪ್ತಿ ಕಾರಣದಿಂದ ಮಾನ್ವಿ ತಹಶೀಲ್ದಾರ್ ರಾಮಾಚಾರ ಅರ್ವಾಲಕರ್ ಮತ್ತು ಸಿಪಿಐ ಕಾಶಿನಾಥ ಅವರು ರೈತರ ಮೇಲೆ ಲಾಠಿ ಪ್ರಹಾರ ಮತ್ತು ಠಾಣೆಗೆ ಕರೆದು ಅಮಾನುಷ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1994 ಜೂನ್ 1 ರಂದು ನ್ಯಾಯಾಲಯಕ್ಕೆ ಖಾಸಗಿ ಪ್ರಕರಣ ಹಿನ್ನೆಲೆಯಲ್ಲಿ ನಿನ್ನೆ ಜೆಎಂಎಫ್‌ಸಿ 3ನೇ ನ್ಯಾಯಾಲಯದ ನ್ಯಾಯಾಧೀಶರಾದ ಅವಿನಾಶ ಗಾಳಿ ಅವರು ಮಹತ್ವದ ತೀರ್ಪು ನೀಡಿದ್ದಾರೆಂದು ರೈತ ಮುಖಂಡ ಶಂಕರಗೌಡ ಹರವಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, 1994 ಜೂನ್ 1 ರಂದು ಮಾನ್ವಿ ತಾಲೂಕಿನ ತಡಕಲ್ ಗ್ರಾಮದಲ್ಲಿ ಆರ್‌ಡಿಸಿಸಿ ಬ್ಯಾಂಕ್‌ನಿಂದ ರೈತರ ಮನೆ ಜಪ್ತಿಗೆ ಆಗಮಿಸಲಾಗಿತ್ತು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಂದು ನಾನು ರಾಜ್ಯ ರೈತ ಸಂಘದ ಮುಖಂಡನಾಗಿ ನಾಗರಾಜ ಮತ್ತು ಇನ್ನಿತರರು ಸೇರಿದಂತೆ ಜಪ್ತಿ ತಡೆಯುವಂತೆ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆ ಇಡೀ ದಿನ ಮುಂದುವರೆಸಲಾಗಿದ್ದು, ಸಂದೆ ವೇಳೆ ಗ್ರಾಮದಲ್ಲಿ ವಿದ್ಯುತ್ ಕಡಿತ ಮಾಡಿ, ಪೊಲೀಸರು ಕಲ್ಲು ತೂರಿ, ನಂತರ ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹಾರ ಘಟನೆಯಿಂದ ಪ್ರತಿಭಟನೆ ನಿರತ ರೈತರು ಅಲ್ಲಿಂದ ಚದುರಿದ್ದರು. ನಂತರ ನನ್ನನ್ನು ಮತ್ತು ಬಸವನಗೌಡ ಹಾಗೂ ತಡಕಲ್ ಮಲ್ಲಿಕಾರ್ಜುನ ಅವರನ್ನು ಠಾಣೆಗೆ ಕರೆತಂದು ಪೊಲೀಸರು ನಮ್ಮ ಮೇಲೆ ಮನ್ಸೋ ಇಚ್ಛೆ ಹಲ್ಲೆ ಮಾಡ್ಡಿದ್ದರು. ಈ ಹಲ್ಲೆಯ ಸಂದರ್ಭದಲ್ಲಿ ಬಸವನಗೌಡ ಅವರ ಕೈ ಮೂಳೆ ಮುರಿದು, ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿದರು. ನನಗೆ ಬೆತ್ತಗಳಿಂದ ಹೊಡೆಯಲಾಗಿತ್ತು.
ಈ ಘಟನೆಗೆ ಸಂಬಂಧಿಸಿ ಖಾಸಗಿ ಪ್ರಕರಣವೊಂದನ್ನು ದಾಖಲಿಸಿ, ನಮ್ಮ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ನೀಡುವಂತೆ ಕೋರಲಾಯಿತು. ತಹಶೀಲ್ದಾರ್ ಮತ್ತು ಸಿಪಿಐ ತಡೆಯಾಜ್ಞೆ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಸ್ಥಗಿತಗೊಂಡಿತು. ಇತ್ತೀಚಿಗೆ ನಾಲ್ಕೈದು ತಿಂಗಳಗಳ ಹಿಂದೆ ಮತ್ತೇ ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಜೆಎಂಎಫ್‌ಸಿ ನ್ಯಾಯಾಲಯ ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಿತು. ವಾದ, ಪ್ರತಿವಾದಗಳ ನಂತರ ನ್ಯಾಯಮೂರ್ತಿ ಅವಿನಾಶ ಗಾಳಿ ಅವರು, ಅಂದಿನ ತಹಶೀಲ್ದಾರಾಗಿದ್ದ ರಾಮಾಚಾರಿ ಅರ್ವಾಲಕರ್ ಮತ್ತು ಸಿಪಿಐ ಕಾಶಿನಾಥ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಬಸವನಗೌಡ, ಮಲ್ಲಿಕಾರ್ಜುನ, ಅಮರೇಗೌಡ ವಕೀಲ, ಅಮರೇಶ ಹೊಸಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.