ರೈತರ ಮೇಲೆ ಕಡಜದ ಹುಳುಗಳು ದಾಳಿ: ಇಬ್ಬರ ಸಾವು

ಕೆ.ಆರ್.ಪೇಟೆ.ಸೆ.14: ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ನಾಗರಘಟ್ಟ ಗ್ರಾಮದಲ್ಲಿ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರ ಮೇಲೆ ತೆಂಗಿನ ಮರದಲ್ಲಿ ಗೂಡು ಕಟ್ಡಿಕೊಂಡಿದ್ದ ಕಡಜದ ಹುಳುಗಳು ದಾಳಿ ಮಾಡಿದ ಪರಿಣಾಮ ಇಬ್ಬರು ರೈತರು ಮೃತಪಟ್ಟಿರುವ ಘಟನೆ ನಡೆದಿದೆ.
ನಾಗರಘಟ್ಟ ಗ್ರಾಮದ ಚಿಕ್ಕೇಗೌಡರ ಮಗ ನಾಗರಾಜೇಗೌಡ (65), ಮತ್ತು ರಾಮೇಗೌಡರ ಮಗ ನಂಜಪ್ಪ (60) ಮೃತ ದುರ್ದೈವಿ ರೈತರುಗಳಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮ್ಮ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ನಾಗರಾಜೇಗೌಡ, ನಂಜಪ್ಪ, ಕುಮಾರಸ್ವಾಮಿ ಅವರಿಗೆ ನೂರಾರು ಕಡಜದ ಹುಳುಗಳು ಕಚ್ಚಿದ ಕಾರಣ ಮೂರೂ ರೈತರು ಅಸ್ವಸ್ಥಗೊಂಡಿದ್ದರು. ಕೂಡಲೆ ಮೂವರನ್ನು ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ತೆಗೆ ದಾಖಲು ಮಾಡಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ನಾಗರಾಜೇಗೌಡ ಮತ್ತು ನಂಜಪ್ಪ ಮೃತಪಟ್ಟಿದ್ದಾರೆ. ಮತ್ತೊರ್ವ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರು ರೈತರು ಅಕಾಲಿಕ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಮೃತರ ಶವವನ್ನು ಗ್ರಾಮಕ್ಕೆ ತಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಎರಡು ಕುಟುಂಬಗಳು ಬಡ ಕುಟುಂಬವಾಗಿದ್ದು ಜೀವನ ನಡೆಸಲು ತುಂಬಾ ತೊಂದರೆಯಾಗಿದೆ ಆದ್ದರಿಂದ ಸರ್ಕಾರವು ಇಬ್ಬರೂ ರೈತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನಾಗರಘಟ್ಟ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿ ಸಚಿವ ನಾರಾಯಣಗೌಡರು ಸದನದ ಕಲಾಪದಲ್ಲಿ ಇರುವ ಕಾರಣ ಇಂದು ಬರಲು ಸಾಧ್ಯವಾಗಿಲ್ಲ.ಮೃತ ಎರಡೂ ರೈತರು ಬಡವರಾಗಿದ್ದು ಸಚಿವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಘಲಯ ಶ್ರೀಧರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಸ್.ಮಂಜೇಗೌಡ, ಮುಖಂಡರಾದ ಜವರೇಗೌಡ, ಮಾಸ್ಟರ್ ರಮೇಶ್, ಅಘಲಯ ಮಂಜಣ್ಣ, ನಾಗರಘಟ್ಟ ದಿಲೀಪ್ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.