ರೈತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಹನೂರು:ಇ:01: ಭಾರತೀಯ ಕಿಸಾನ್ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ್ಯ ಹನೂರು ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಕಂದಾಯ ಇಲಾಖೆಯಲ್ಲಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಇಲಾಖೆಯಲ್ಲಿ ಉಂಟಾಗಿರುವ ಲೋಪ ದೋಷಗಳನ್ನು ನಿವಾರಿಸದೇ ನಿರ್ಲಕ್ಷ್ಯ ವಹಿಸಿರುವ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು.
ಇಂದು ಬೆಳಿಗ್ಗೆ ಮಲೆಮಹದೇಶ್ವರ ಬೆಟ್ಟ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಜಮಾಯಿಸಿದ ಪ್ರತಿಭಟನಕಾರರು ಅಲ್ಲಿಂದ ಮುಖ್ಯ ರಸ್ತೆ ಮೂಲಕ ಖಾಸಗಿ ಬಸ್ ನಿಲ್ದಾಣ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಆವರಣದ ಹೊರಗಡೆ ಕುಳಿತು ಪ್ರತಿಭಟನೆಯನ್ನು ನಡೆಸಿದರು.
ಈ ವೇಳೆ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಪ್ರತಿಭಟನೆಯನ್ನು ಕೈ ಬಿಟ್ಟು ತಹಶೀಲ್ದಾರ್ ಅವರ ಜೊತೆ ಮಾತನಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಕ್ಕೆ ಕೆಂಡಮಂಡಲರಾದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಮಾಪುರ ರಾಜೇಂದ್ರ ಮಾತನಾಡಿ, ತಹಶೀಲ್ದಾರ್ ಅವರಿಂದಲೇ ಅನೇಕ ತಪ್ಪುಗಳಾಗಿದೆ. ಆಗಾಗಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು. ಪೌತಿ ಖಾತೆಗಳನ್ನು ಅಕ್ರಮವಾಗಿ ಮಾಡುತ್ತಿರುವವರ ವಿರುದ್ಧ ಕ್ರಮ ವಹಿಸದೇ ಇರುವುದು, ಅರಣ್ಯದಂಚಿನಲ್ಲಿ (ಬಫರ್ ಜೋನ್) ಹಾಗೂ ಕೃಷಿ ಜಮೀನುಗಳಲ್ಲಿ ಸೋಲಾರ್ ಪ್ಲಾಂಟೇಷನ್ ನಿರ್ಮಿಸಲು ಅನುವು ಮಾಡಿಕೊಟ್ಟಿ ರುವುದು, ಸೇರಿದಂತೆ ಕಂದಾಯ ಇಲಾಖೆಯ ಲೋಪ ದೋಷಗಳ ಬಗ್ಗೆ ಹರಿಹಾಯ್ದ ಅವರು ಅರಣ್ಯ ಇಲಾಖೆ, ಕೃಷಿ ಇಲಾಖೆಯಿಂದ ರೈತರಿಗೆ ಆಗುತ್ತಿರುವ ತೊಂದರೆಗಳು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ದೂರಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರುಗಳು, ರೈತರು ಇದ್ದರು.