ರೈತರ ಮೆಣಸಿನ ಕಾಯಿ ಬೆಳೆಗೆ ಟ್ಯಾಂಕರ್ ಮೂಲಕ ನೀರು


ಜಾಲಿಹಾಳ್ ರಾಜಸಾಬ್
ಸಿರುಗುಪ್ಪ, ಜ.03: ತಾಲ್ಲೂಕಿನಲ್ಲಿ ಮಳೆ ಮಾಯ ವಾಗಿರುವುದರಿಂದಾಗಿ, ಭತ್ತದ ನಾಡು ಈಗ ಬರಪೀಡಿತ ನಾಡು ಆಗಿದೆ, ಇದರ ಮಧ್ಯೆ ಕಾಲುವೆ ನೀರು ಮರೀಚಿಕೆ ಯಾಗಿದೆ. ತಾಲ್ಲೂಕಿನಲ್ಲಿ ಮೆಣಸಿನ ಕಾಯಿ ಬೆಳೆದ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ನೀರನ್ನು ಹರಿಸುತ್ತಿದ್ದಾರೆ
ತಾಲ್ಲೂಕಿನ ವಿವಿಧ ಗ್ರಾಮಗಳಾದ ರಾರಾವಿ, ಚಾಣಕನೂರು, ಬಗ್ಗೂರು, ಕರ್ಚಿಗನೂರು, ಕುಡುದರ ಹಾಳು, ಬಿಜಿದಿನ್ನಿ, ಕೊತ್ತಲ ಚಿಂತ ಸೇರಿದಂತೆ ಹಲವಾರು ಗ್ರಾಮಗಳ ರೈತರು ಟ್ಯಾಂಕರ್ ನೀರನ್ನು ಹರಿಸುವ ಪರಿಸ್ಥಿತಿ ಉಂಟಾಗಿದೆ.
ತಾಲ್ಲೂಕಿನ ಕೃಷಿ ಹೊಂಡ ಹೊಂದಿರುವ ನಾಡಂಗ, ಅಗಸನೂರು, ಬೊಮ್ಮಲಾಪುರ, ಬಿ.ಎಂ. ಸೂಗೂರು, ಇಟಗಿಹಾಳ್ ಗ್ರಾಮಗಳ ರೈತರಿಗೆ ಮೆಣಸಿನ ಬೆಳೆ ಬೆಳೆಯಲು ಕೆಲ ರೈತರು ತಮ್ಮ ಕೃಷಿ ಹೊಂಡದ ನೀರನ್ನು ರೈತರಿಗೆ ನೀಡಿ ಮೆಣಸಿನ ಕಾಯಿ ಬೆಳೆದ ರೈತರ ಸಂಕಷ್ಟಕ್ಕೆ ನಿಂತಿದ್ದಾರೆ.
ಮೆಣಸಿನಕಾಯಿ ಬೆಳೆಗೆ ಕಳೆದ ಹಿಂದಿನ ವರ್ಷ ಉತ್ತಮ ಬೆಲೆಯಿಂದಾಗಿ ತಾಲ್ಲೂಕಿನಲ್ಲಿ ಈ ಬಾರಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ನಾಟಿ ಮಾಡಿದ್ದಾರೆ. ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಿಂದ ಬೆಳೆಗಳು ಬಾಡತೊಡಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ.
 ಬ್ಯಾಡಗಿ ಮತ್ತು ಗುಂಟೂರು ತಳಿಯ ಮೆಣಸಿನಕಾಯಿ  ಎಕರೆಗೆ ಕನಿಷ್ಠ ಆರು ಕ್ವಿಂಟಾಲ್ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ನೀರಿನ ಕೊರತೆಯಿಂದಾಗಿ ಬೆಳೆಗಾಗಿ ಮಾಡಿದ ಖರ್ಚನ್ನು ತೆಗೆಯಲು ಆಗದಿರುವುದರಿಂದ ರೈತರು ಕಷ್ಟ ಎದುರಿಸುತ್ತಿದ್ದಾರೆ.
ಬೆಳೆ ಉಳಿಸಿಕೊಳ್ಳಲು ರೈತರು ಒಂದು ಎಕರೆಗೆ ಕನಿಷ್ಟ 40 ರಿಂದ 60 ಟ್ಯಾಂಕರ್ ನೀರು ಬೇಕಾಗುತ್ತದೆ, ಟ್ರ್ಯಾಕ್ಟರ್  ಬಾಡಿಗೆ ₹2500, ಟ್ಯಾಂಕರ್ ₹800 ಹಾಗೂ ಡೀಸೆಲ್ ಮೋಟಾರ್ ಒಂದು ದಿನಕ್ಕೆ ₹ 3.500 ಒಟ್ಟಾರೆ ಒಂದು  ಟ್ಯಾಂಕರ್ ನೀರಿಗೆ ₹6800 ನೀರನ್ನೂ ಹಣ ಕೊಟ್ಟು ರೈತರು  ಖರೀದಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ರೈತರಾದ ಅಗಸನೂರು ಗ್ರಾಮದಎ.ಕೆ. ಶಿವಕುಮಾರ್, ನಾಡಂಗದ ಗಾದಿಲಿಂಗ, ಕೊತ್ತಲ ಚಿಂತ ಗ್ರಾಮದ ಮಂಜುನಾಥ ಅಂಚಿನಾಳ್, ಮಿಟ್ಟೆ ಸೂಗೂರು ಗ್ರಾಮದ ಹರೀಶ್ ನಾಯಕ ಇದ್ದರು.
ಹೇಳಿಕೆ:- ಮೆಣಸಿನ ಬೆಳೆಗೆ ಬ್ಲಾಕ್ ಧ್ರಿಬ್ಸ್ ರೋಗ ಬಾಧೆ ಕಂಡು‌ ಬಂದಿದ್ದು. ಇದರಿಂದಾಗಿ ಗಿಡಗಳು ಮುದುರಿಕೊಂಡಿದ್ದು, ಹೂ ಬಿಡುತ್ತಿಲ್ಲ ಹಾಗೂ ಗಿಡಗಳ ಬೆಳವಣಿಗೆ ಆಗುತ್ತಿಲ್ಲ ಎಂದು ಬೊಮ್ಮಲಾಪುರದ ರೈತ ಶ್ರೀನಿವಾಸ ಅಲವತ್ತುಕೊಂಡರು.
 ಗುಬ್ಬಿಹಾಳ, ಬೊಮ್ಮಲಾಪುರ, ಮಿಟ್ಟೆಸೂಗೂರು ಗ್ರಾಮಗಳಲ್ಲಿ ಮೆಣಸಿನ ಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿದ್ದು ರೈತರು ರಾತ್ರಿ ಹೊಲದಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ರೈತರಿಗೆ ಈ ಬಾರಿ ಮೆಣಸಿನಕಾಯಿ ಬೆಳೆ ಬೆಳೆಯದಂತೆ ತೋಟಗಾರಿಕೆ ಇಲಾಖೆ ಸೂಚನೆ ನೀಡಿದ್ದರು. ಆದರೂ ಸೂಚನೆ ಮೀರಿ ರೈತರು ಈ ಬೆಳೆ ಬೆಳೆದಿದ್ದರೆ ಈಗ  ನೀರಿನ ಕೊರತೆ ಎದುರಿಸುವಂತಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಖಾದರ್ ಭಾಷ ತಿಳಿಸಿದರು.