ರೈತರ ಮುಕ್ತ ವ್ಯಾಪಾರಕ್ಕೆ ಅಡ್ಡಿ: ಕ್ರಮ ವಹಿಸುವಂತೆ ರೈತಸಂಘ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.04: ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ರೈತರ ಮುಕ್ತ ವ್ಯಾಪಾರಕ್ಕೆ ವರ್ತಕರು ಅಡ್ಡಿಪಡಿಸುತ್ತಿದ್ದು ಇದರ ವಿರುದ್ದ ಕ್ರಮ ವಹಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.
ಪಟ್ಟಣದ ಎ.ಪಿ.ಎಂ.ಸಿ ಕಾರ್ಯದರ್ಶಿ ರಫಿಕ್ ಅಹಮದ್ ಅವರನ್ನು ಭೇಟಿ ಮಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಎ.ಪಿ.ಎಂ.ಸಿ ಯಲ್ಲಿ ರೈತ ಸಮುದಾಯಕ್ಕೆ ವರ್ತಕರಿಂದ ಆಗುತ್ತಿರುವ ಕಿರುಕುಳವನ್ನು ಪ್ರಸ್ತಾಪಿಸಿ ವರ್ತಕರ ಕಿರುಕುಳ ನಿಲ್ಲದಿದ್ದರೆ ರೈತಸಂಘ ಎ.ಪಿ.ಎಂ.ಸಿ ಆವರಣದಲ್ಲಿ ಹೋರಾಟ ಆರಂಭಿಸುತ್ತದೆ ಎಂದು ಎಚ್ಚರಿಸಿದರು.
ಎ.ಪಿ.ಎಂ.ಸಿ ಆವರಣದಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆ ವ್ಯಾಪಾರಿಗಳ್ಯಾರೂ ಎ.ಪಿ.ಎಂ.ಸಿ ಗೆ ತೆರಿಗೆ ಕಟ್ಟುತ್ತಿಲ್ಲ. ಸಂತೆಯಲ್ಲಿ ಮಾರಾಟಕ್ಕಾಗಿ ರೈತರು ಮುಂಜಾನೆ 05 ಘಂಟೆಗೆ ತಾವು ಬೆಳೆದ ಸೊಪ್ಪು, ತರಕಾರಿ, ಕಾಳು ಕಡ್ಡಿಗಳನ್ನು ಮಾರಾಟಕ್ಕೆ ತರುತ್ತಾರೆ. ರೈತರು ಮಾರಾಟಕ್ಕಾಗಿ ತಂದಿಟ್ಟ ಜಾಗವನ್ನು ಖಾಲಿ ಮಾಡುವಂತೆ ಸಂತೆ ವ್ಯಾಪಾರಿಗಳು ಮತ್ತು ದಳ್ಳಾಳಿಗಳು ಬೆದರಿಕೆ ಹಾಕುತ್ತಿದ್ದಾರೆ. ಎ.ಪಿ.ಎಂ.ಸಿ ರೈತರಿಗೆ ಸೇರಿದ್ದು. ಇಲ್ಲಿ ಮಾರಾಟ ಮಾಡುವ ಅಧಿಕಾರ ರೈತರಿಗೆ ಮಾತ್ರ ಇದೆ. ಮಾರಟ ಮಾಡಲು ಬಂದ ರೈತರನ್ನು ಒಕ್ಕಲೆಬ್ಬಿಸಿ ಅದೇ ಜಾಗದಲ್ಲಿ ವ್ಯಾಪಾರ ಮಾಡುವ ಹಕ್ಕು ವರ್ತಕರಿಗಿಲ್ಲ. ಎ.ಪಿ.ಎಂ.ಸಿ ಇರುವುದೇ ರೈತರ ಉತ್ಪನ್ನಗಳ ಮಾರಾಟಕ್ಕೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸ್ವಯಂ ಮಾರಾಟ ಮಾಡಲು ವರ್ತಕರು ಅಡ್ಡಗಾಲು ಹಾಕುತ್ತಿರುವುದನ್ನು ರೈತಸಂಘ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ಬಗ್ಗೆ ಎ.ಪಿ.ಎಂ.ಸಿ ಕಾರ್ಯದರ್ಶಿಗಳು ತಕ್ಷಣ ಗಮನಹರಿಸಿ ರೈತರು ಮಾರಾಟ ಮಾಡಲು ಅಗತ್ಯ ರಕ್ಷಣೆ ನೀಡಬೇಕೆಂದು ಪುಟ್ಟೇಗೌಡ ಒತ್ತಾಯಿಸಿದರು.
ತೂಕದ ಲೆಕ್ಕದಲ್ಲಿ ಎಳನೀರು ವ್ಯಾಪಾರ ಆರಂಭಿಸಿ: ಎ.ಪಿ.ಎಂ.ಸಿ ಯಲ್ಲಿ ಎಳನೀರು ಕೊಂಡುಕೊಳ್ಳುವ ವರ್ತಕರಿಂದ ರೈತರಿಗೆ ಭಾರೀ ಪ್ರಮಾಣದ ಅನ್ಯಾಯವಾಗುತ್ತಿದೆ. ಬಿಡಿ ಲೆಕ್ಕದಲ್ಲಿ ವರ್ತಕರು ರೈತರಿಂದ ಎಳನೀರು ಖರೀದಿಸುತ್ತಿದ್ದು ಪ್ರತಿ 100 ಎಳನೀರಿಗೆ 06 ಎಳನೀರನ್ನು ಸೋಡಿ(ಕೇಡು ಲೆಕ್ಕ) ಹೆಸರಿನಲ್ಲಿ ರೈತರಿಂದ ಉಚಿತವಾಗಿ ಕಿತ್ತುಕೊಳ್ಳುತ್ತಿದ್ದಾರೆ. ತೆಂಗಿನ ಕಾಯಿ ವ್ಯಾಪಾರದಲ್ಲಿಯೂ ಇದೇ ರೀತಿ ರೈತರಿಗೆ ವಂಚನೆಯಾಗುತ್ತಿದೆ. ಒಂದು ಟನ್ ಕಾಯಿಗೆ 20 ಕೆ.ಜಿ ಕೇಡು ಕಳೆದು ರೈತರಿಗೆ ವಂಚನೆ ಮಾಡಲಾಗುತ್ತಿದೆ. ಎಳನೀರು ವಹಿವಾಟಿನ ದೈನಂದಿನ ಆನ್ ಲೈನ್ ಮಾರಾಟ ಬೆಲೆಯನ್ನು ಎ.ಪಿ.ಎಂ.ಸಿ ಬಹಿರಂಗವಾಗಿ ಪ್ರದರ್ಶಿಸುತ್ತಿಲ್ಲ. ಇದರಿಂದ ರೈತರಿಗೆ ಮಾರಟ ಬೆಲೆಯಲ್ಲೂ ವಂಚನೆಯಾಗುತ್ತಿದೆ. ಎಳನೀರು ಮತ್ತು ಕಾಯಿ ಮಾರಟದಲ್ಲಿ ಕೇಡು ಕಳೆಯುವ ನಿಯಮ ಎ.ಪಿ.ಎಂ.ಸಿ ನಿಯಮಾವಳಿಯಲ್ಲಿ ಇಲ್ಲ. ಕೇಡು ಕಳೆಯುವ ಲೆಕ್ಕದಲ್ಲಿ ರೈತರಿಂದ ಉಚಿತವಾಗಿ ಹೆಚ್ಚುವರಿ ಎಳನೀರು ಮತ್ತು ತೆಂಗಿನ ಕಾಯಿ ಪಡೆಯುತ್ತಿರುವ ವರ್ತಕರ ವಿರುದ್ದ ಕ್ರಮ ಜರುಗಿಸಬೇಕು. ಬಿಡಿ ಎಳನೀರು ಮಾರಾಟ ದಂದೆಯನ್ನು ನಿಲ್ಲಿಸಿ ಎಳನೀರನ್ನು ಕೆ.ಜಿ.ಲೆಕ್ಕದಲ್ಲಿ ತೂಕ ಹಾಕಿ ಕೊಂಡುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಎ.ಪಿ.ಎಂ.ಸಿ ರೈತರ ಪರವಾಗಿ ನಿಂತು ರೈತರಿಗೆ ರಕ್ಷಣೆ ನೀಡಬೇಕೆ ಹೊರತು ದಳ್ಳಾಳಿಗಳ ಪರವಾಗಿ ಇರಬಾರದೆಂದು ರೈತಸಂಘದ ಅಧ್ಯಕ್ಷ ಪುಟ್ಟೇಗೌಡ ಆಗ್ರಹಿಸಿದರು.
ರೈತಸಂಘದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಎ.ಪಿ.ಎಂ.ಸಿ ಕಾರ್ಯದರ್ಶಿ ರಫಿಕ್ ಅಹಮದ್ ಎ.ಪಿ.ಎಂ.ಸಿ ಆವರಣದಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ನಡೆಯುವ ಗ್ರಾಮೀಣ ಸಂತೆಗೆ ಅವಕಾಶ ಇಲ್ಲ. ಗ್ರಾಮೀಣ ಸಂತೆಯನ್ನು ಎ.ಪಿ.ಎಂ.ಸಿ ಆವರಣದಿಂದ ತೆರವುಗೊಳಿಸಿಕೊಡುವಂತೆ ನಮ್ಮ ಇಲಾಖೆಯ ವತಿಯಿಂದ ತಹಸೀಲ್ದಾರರಿಗೆ ಮತ್ತು ಪುರಸಭೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮೀಣ ಸಂತೆಯಿಂದ ಎ.ಪಿ.ಎಂ.ಸಿಗೆ ಯಾವುದೇ ಆದಾಯ ಇಲ್ಲ. ಸಂತೆ ವ್ಯಾಪಾರಿಗಳಿಂದ ನಾವು ಯಾವುದೇ ರೀತಿಯ ಸುಂಕ ವಸೂಲಾತಿ ಮಾಡುತ್ತಿಲ್ಲ. ಸಂತೆಯ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸುವ ವೆಚ್ಚವನ್ನು ಎ.ಪಿ.ಎಂ.ಸಿಯೇ ಮಾಡುತ್ತಿದ್ದು ವಾರದ ಸಂತೆಯಿಂದ ಎ.ಪಿ.ಎಂ.ಸಿಗೆ ನಷ್ಠವಾಗುತ್ತಿದೆ. ಸಂತೆ ವ್ಯಾಪಾರಿಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲಾಗುವುದು. ಕೇಡು ಲೆಕ್ಕದಲ್ಲಿ ರೈತರಿಂದ ಯಾವುದೇ ಉತ್ಪನ್ನಗಳನ್ನು ಉಚಿತವಾಗಿ ಪಡೆಯುವ ಅವಕಾಶ ಎ.ಪಿ.ಎಂ.ಸಿ ನಿಯಮಾವಳಿಗಳಲ್ಲಿ ಇಲ್ಲ. ತೂಕದ ಲೆಕ್ಕದಲ್ಲಿ ಎಳನೀರು ಮಾರಾಟಕ್ಕೆ ಅನುವು ಮಾಡುವ ಮತ್ತು ಎಳನೀರು ಮತ್ತು ತೆಂಗಿನ ಕಾಯಿ ಮಾರಾಟದ ಸಂದರ್ಭಲ್ಲಿ ಕೇಡಿನ ಲೆಕ್ಕದಲ್ಲಿ ರೈತರಿಂದ ಉಚಿತವಾಗಿ ಪಡೆಯುವುದನ್ನು ತಪ್ಪಿಸಲು ಶೀಘ್ರದಲ್ಲಿಯೇ ರೈತರು ಮತ್ತು ವರ್ತಕ ಸಮುದಾಯದ ನಡುವೆ ಮುಖಾಮುಖಿ ಚರ್ಚೆ ನಡೆಸುವ ಭರವಸೆ ನೀಡಿದರು.
ರೈತ ಮುಖಂಡರಾದ ಚೌಡೇನಹಳ್ಳಿ ಕೃಷ್ಣೇಗೌಡ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಎ.ಪಿ.ಎಂ.ಸಿ ಅಧಿಕಾರಿ ಸತೀಶ್ ಇದ್ದರು.