ರೈತರ ಬೇಡಿಕೆ ಈಡೇರಿಸಲು ಮನವಿ


ಶಿರಹಟ್ಟಿ,ನ.10- ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ವಾಪಾಸ್ ಪಡೆಯಬೇಕು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಹಿಂದ ಸಂಘಟನೆಯ ವತಿಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಸೋಮನಗೌಡ ಮರಿಗೌಡ್ರ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ ಕುರಿ ಮಾತನಾಡುತ್ತಾ, ಭೂಸ್ವಾಧೀನ ಕಾಯ್ದೆ ರೈತರಿಗೆ ಮಾರಕವಾಗಿದ್ದು, ರೈತ ವಿರೋಧಿಯಾಗಿರುವ ಎಪಿಎಂಸಿ ಕಾಯ್ದೆ, ರೈತರು ರಾಷ್ಟ್ರೀಯ ಬ್ಯಾಂಕ್‍ನಿಂದ ಪಡೆದಿರುವ ಸಾಲ ಹಾಗೂ ಸ್ತ್ರೀಶಕ್ತಿ ಸಂಘಗಳಿಂದ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ಹಲವಾರು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಬಗರ್‍ಹುಕುಂ (ಹುಲಿಕಲ್ ಅಡವಿ) ಅಡಿಯಲ್ಲಿ ಹಕ್ಕು ಪತ್ರಗಳನ್ನು ವಿತರಿಸಬೇಕು. ನೈಸರ್ಗಿಕ ವಿಪತ್ತುಗಳಿಗೆ ತುತ್ತಾಗಿರುವ ರೈತರ ಕುಟುಂಬಕ್ಕೆ ಸಕಾಲಕ್ಕೆ ಪರಿಹಾರ ಒದಗಿಸಿ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರ ಜಮೀನಿನಲ್ಲಿರುವ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಇತ್ತೀಚೆಗೆ ಅತಿಯಾಗಿ ಮಳೆ ಸುರಿದ ಪರಿಣಾಮ ಹಲವಾರು ಮನೆಗಳು ಬಿದ್ದಿರುವದರಿಂದ ಕೂಡಲೇ ಸರಕಾರ ಪರಿಹಾರ ಒದಗಿಸಬೇಕು. ವಿಳಂಬ ನೀತಿ ಅನುಸರಿಸದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಹಾದಿಮನಿ, ರಾಜೇಸಾಬ ಢಾಲಾಯತ್, ಮೋದಿನಸಾಬ ನಡುವಿನಮನಿ, ಶರಣಪ್ಪ ಬಡ್ನಿ, ಸಹದೇವಪ್ಪ ನಾವ್ಹಿ, ದ್ಯಾಮವ್ವ ಬಡ್ನಿ, ಫಕ್ಕೀರಪ್ಪ ಕಟ್ಟೇಕಾರ, ಹುಲಿಗೆವ್ವ ಗಡಿಗಣ್ಣವರ, ಕಾಶಪ್ಪ ಡೊಂಕಬಳ್ಳಿ, ಯಲ್ಲಪ್ಪ ಕಾಳಿ, ನಾಗಪ್ಪ ಡೊಂಕಬಳ್ಳಿ, ದೇವಪ್ಪ ಬಟ್ಟೂರ, ಬಸಪ್ಪ ಮುಳಗುಂದ, ಕರಿಯಪ್ಪ ಬಳೂಟಗಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.